ಬೆಂಗಳೂರು: ಕರ್ನಾಟಕ ಪಠ್ಯಪುಸ್ತಕ ಸಮಿತಿಯು 2024-25ನೇ ಸಾಲಿನ 1 ರಿಂದ10ನೇ ತರಗತಿಯವರೆಗೆ ಪಠ್ಯಪುಸ್ತಕಗಳಲ್ಲಿ ಮಾಡಿರುವ ಬದಲಾವಣೆಗಳ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಬಗ್ಗೆ ಅಧಿಕಾರಿಗಳು ದೊಡ್ಡ ಘೋಷಣೆ ಮಾಡದೆ ಸದ್ದಿಲ್ಲದೆ ಸಂಜೆ ತಡವಾಗಿ ಅಧಿಸೂಚನೆ ಹೊರಡಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ನಿವೃತ್ತ ಇತಿಹಾಸ ಪ್ರಾಧ್ಯಾಪಕ ಮಂಜುನಾಥ ಹೆಗಡೆ ನೇತೃತ್ವದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಕ್ಕೆ ಪೂರಕವಾಗಿ ಪಠ್ಯಕ್ರಮದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ಪಠ್ಯ ಪುಸ್ತಕದಲ್ಲಿ ರಾಜ್ಯದ ಸಾಂಸ್ಕೃತಿಕ ನಾಯಕರನ್ನು ಕೇಂದ್ರೀಕರಿಸಿ ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಮತ್ತು ಜ್ಞಾನಪೀಠ ಪುರಸ್ಕೃತರ ಕೃತಿಗಳನ್ನು 8 ರಿಂದ 10 ನೇ ತರಗತಿ ಪಠ್ಯಗಳಿಗೆ ಸೇರಿಸಲಾಗಿದೆ.
ಪರಿಷ್ಕೃತ ಪಠ್ಯಪುಸ್ತಕಗಳ ಮೂಲ ಚೌಕಟ್ಟನ್ನು ಬದಲಾಯಿಸದೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಪರಿಷ್ಕರಣೆ ನಡೆಸಲಾಗಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಪಠ್ಯ ಸೇರ್ಪಡೆ ಮತ್ತು ಲೋಪಕ್ಕೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸರ್ಕಾರಿ ಇಲಾಖೆಗಳು ಮಾಡಿದ ಎಲ್ಲಾ ಮನವಿಗಳನ್ನು ಮತ್ತು ಸಲಹೆಗಳನ್ನು ಪರಿಶೀಲಿಸಲಾಗಿದೆ ಎಂದು ಅಧಿಸೂಚನೆ ತಿಳಿಸಿದೆ.
ಅಧಿಸೂಚನೆ ಪ್ರಕಾರ, ಸಂವಿಧಾನ, ಲಿಂಗ ಸಂವೇದನೆ, ಮಕ್ಕಳ ಹಕ್ಕುಗಳ ಮಾಹಿತಿ ಮತ್ತು ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜ ವಿಜ್ಞಾನ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲಾಗಿದೆ. ರಾಜಕೀಯ ವಿಜ್ಞಾನ ಪುಸ್ತಕಗಳಲ್ಲಿ ಮಹಿಳಾ ಮೀಸಲಾತಿ ಮಸೂದೆ, ಭಾರತದ ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಶಾಸಕಾಂಗ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಮಾಹಿತಿಯಂತಹ ಹೊಸ ಬೆಳವಣಿಗೆಗಳನ್ನು ಸೇರಿಸಲಾಗಿದೆ. ಶೀರ್ಷಿಕೆಗಳು ಮತ್ತು ವಿವಿಧ ಅಧ್ಯಾಯಗಳಲ್ಲಿ ಹಲವಾರು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ‘ರಿಲಿಜನ್’ ಪದಗಳನ್ನು ‘ಧರ್ಮ’ ಎಂದು ಬದಲಾಯಿಸಲಾಗಿದೆ ಮತ್ತು ಸನಾತನ ಧರ್ಮ ಅಧ್ಯಾಯಕ್ಕೆ ಹೆಚ್ಚಿನ ಮಾಹಿತಿಯನ್ನು ಸೇರಿಸಲಾಗಿದೆ. ಸಂಬಂಧಿತ ವಿಷಯದ ಪ್ರಕಾರ, ನಕ್ಷೆಗಳು, ತಾಲೂಕು ಮತ್ತು ಜಿಲ್ಲೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಸಹ ನವೀಕರಿಸಲಾಗಿದೆ.
ಪರಿಷ್ಕರಣೆಯಲ್ಲಿ 1-10 ನೇ ತರಗತಿಗಳಿಗೆ ಪ್ರಥಮ ಮತ್ತು ದ್ವಿತೀಯ ಭಾಷೆಗಳೆರಡರ ಕನ್ನಡ ಭಾಷೆಯ ಪಠ್ಯಪುಸ್ತಕಗಳು, 9-10 ನೇ ತರಗತಿಗಳಿಗೆ ತೃತೀಯ ಭಾಷೆಯ ಕನ್ನಡ ಪಠ್ಯಪುಸ್ತಕಗಳು ಮತ್ತು 6-10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಸೇರಿವೆ.