ಮನೆ ಬಾಗಿಲಲ್ಲೆ ಪಡೆಯಿರಿ ರುಚಿ ರುಚಿ ಮಾವು: ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸಲು ಸರ್ಕಾರದ ವೆಬ್ ಪೋರ್ಟಲ್

ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ತನ್ನ ಗ್ರಾಹಕರಿಗೆ ರುಚಿಕರವಾದ ಬಗೆ ಬಗೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಸಲುವಾಗಿ ಮಾವಿನ ಪೋರ್ಟಲ್ ಒಂದನ್ನು ತೆರೆದಿದೆ. ಮೇ16 ರಂದು ಬಿಡುಗಡೆಯಾಗಿರುವ ಈ ಪೋರ್ಟಲ್ ನಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳು ಲಭ್ಯವಿದೆ.

ಈಗಾಗಲೇ ಪೋರ್ಟಲ್ ನಲ್ಲಿ  ವಿವಿಧ ಪ್ರಭೇದಗಳ ಮಾವಿನ ಹಣ್ಣಿನ ಆರ್ಡರ್ ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಾಗಿದೆ. ಇಂಡಿಯಾ ಪೋಸ್ಟ್ ಸಹಯೋಗದಲ್ಲಿ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದ್ದು, ಇದು ಗ್ರಾಹಕರ ಮನೆ ಬಾಗಿಲಿಗೆ ರುಚಿಯಾದ ಮಾವಿನ ಹಣ್ಣುಗಳನ್ನು ತಲುಪಿಸಲಿದೆ.

ಅಲ್ಫೋನ್ಸೋ, ಬಾದಾಮಿ, ಆಪೂಸ್, ರಸಪುರಿ, ಮಲ್ಲಿಕಾ, ಹಿಮಾಮ್ ಪಸಂದ್ ಮತ್ತು ಕೇಸರ್ ತಳಿಗಳ ಮಾವಿನ ಹಣ್ಣುಗಳು ಪೋರ್ಟಲ್ ನಲ್ಲಿ ಲಭ್ಯವಿದೆ. ಕೆಎಸ್ಎಂಡಿಎಂಸಿಎಲ್ ಇಂತಹ ಉಪಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ ಕೋವಿಡ್ -19 ರ ನಡುವೆಯೂ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಂದ ಹಣ್ಣುಗಳನ್ನು ಸಂಗ್ರಹಿಸಿ ಮಾರಾಟ ಮಾಡಲಾಗಿತ್ತು. 2021 ರಲ್ಲಿ ಅಂಚೆ ಮೂಲಕ ಮಾವು ವಿತರಣೆ ಮುಂದುವರಿದಿದ್ದು, 2022 ರಲ್ಲಿಯೂ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಸಂಸ್ಥೆಯು ತಿಳಿಸಿದೆ.