60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ: ಕೋವಿಡ್ ಹೆಚ್ಚಳ ಹಿನ್ನೆಲೆ ಮುಂಜಾಗರೂಕತಾ ಕ್ರಮ

ಬೆಂಗಳೂರು: ಕೇರಳದಲ್ಲಿ ಕೋವಿಡ್-19 ಉಪತಳಿ ಜೆಎನ್.1 ಪ್ರಕರಣಗಳ ಹೆಚ್ಚಳ ಭೀತಿಯ ನಡುವೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಸಹವರ್ತಿ ರೋಗಗಳನ್ನು ಹೊಂದಿರುವವರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದೆ.

ಕೋವಿಡ್-19 ಉಪತಳಿ ಜೆಎನ್.1 ರ ರೋಗಲಕ್ಷಣಗಳನ್ನು ವರದಿ ಮಾಡಿರುವ ಜನರಲ್ಲಿ ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕೇರಳದ ಗಡಿ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಕಣ್ಗಾವಲು ಹೆಚ್ಚಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದ್ದು, ಸದ್ಯಕ್ಕೆ ಜನರ ಚಲನವಲನ ಮತ್ತು ಒಟ್ಟುಗೂಡುವಿಕೆಗೆ ಯಾವುದೇ ನಿರ್ಬಂಧದ ಅಗತ್ಯವಿಲ್ಲ. ಅಗತ್ಯಬಿದ್ದಲ್ಲಿ ಸರ್ಕಾರವು ನಿಯಮಗಳನ್ನು ಬಿಡುಗಡೆಗೊಳಿಸಲಿದೆ ಎಂದರು.

“60 ವರ್ಷಕ್ಕಿಂತ ಮೇಲ್ಪಟ್ಟವರು, ಹೃದಯ ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಮತ್ತು ಕೆಮ್ಮು, ಕಫ ಮತ್ತು ಜ್ವರ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇದನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದೇವೆ. ಅಲ್ಲದೆ, ನಾವು ನಮ್ಮ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಸಿದ್ಧಪಡಿಸುವಂತೆ ಕೇಳಿದ್ದೇವೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಕೊಡಗು, ದಕ್ಷಿಣ ಕನ್ನಡ, ಚಾಮರಾಜನಗರದಂತಹ ಗಡಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ” ಎಂದು ಸಚಿವರು ಹೇಳಿದರು.

JN.1 ನ ಲಕ್ಷಣಗಳಲ್ಲಿ ಜ್ವರ, ಶೀತ, ಗಂಟಲು ಕೆರೆತ, ಹೊಟ್ಟೆಯ ಸಮಸ್ಯೆಗಳು ಒಮಿಕ್ರಾನ್ ರೋಗ ಲಕ್ಷಣಗಳಂತೆ ಇದೆ. ಭೀತಿ ಪಡುವ ಅವಶ್ಯವಿಲ್ಲದಿದ್ದರೂ ಮುಂಜಾಗರೂಕತೆ ವಹಿಸುವುದು ಸೂಕ್ತ ಎಂದು ಸಚಿವರು ತಿಳಿಸಿದರು.

ಸೋಮವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 260 ಹೊಸ ಕರೋನವೈರಸ್ ಸೋಂಕುಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳು 1,828 ಕ್ಕೆ ಏರಿದೆ.