ಬೆಳ್ಳಿತೆರೆ ಮೇಲೆ ಬರಲಿದ್ದಾರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ: ನೈಜ ಘಟನೆಯಾಧಾರಿತ ಚಲನ ಚಿತ್ರದಲ್ಲಿ ರಾಜಾಹುಲಿ!

 

ಹೌದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕನ್ನಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಕರ್ನಾಟಕದ ರಾಜಾಹುಲಿ ಎಂದೇ ಖ್ಯಾತನಾಮರಾಗಿರುವ, ಮಾಸ್ ಲೀಡರ್ ಬಿ ಎಸ್ ವೈ ನಟಿಸಿರುವ ಆ ಚಿತ್ರದ ಹೆಸರು ‘ತನುಜಾ’. ಈ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದ್ದು, ಬಿ ಎಸ್ ವೈ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋಗಳು ಹರಿದಾಡುತ್ತಿವೆ.

ಇದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಕೋವಿಡ್ ಸಮಯದಲ್ಲಿ ನೀಟ್ ಪರೀಕ್ಷೆ ಬರೆಯಲು 350 ಕಿಮೀ ಪ್ರಯಾಣಿಸಿದ ಹುಡುಗಿಯ ರೋಮಾಂಚಕಾರಿ ಕಥೆಯಾಗಿದೆ. ಬಿ ಎಸ್ ವೈ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಂಧರ್ಭದಲ್ಲಿ ನಡೆದಿದ್ದ ಈ ಘಟನೆಯಲ್ಲಿ ನೈಜತೆಯನ್ನು ಸೃಷ್ಟಿಸಲು ಮುಖ್ಯಮಂತ್ರಿಯವರ ಪಾತ್ರವನ್ನು ನಿರ್ವಹಿಸುವಂತೆ ಬಿ ಎಸ್ ವೈ ಅವರನ್ನು ಕೋರಲಾಗಿತ್ತು. ಚಿತ್ರ ಕಥೆಯನ್ನು ಕೇಳಿ ರೋಮಾಂಚನಗೊಂಡ ಬಿ ಎಸ್ ವೈ ಮೊಟ್ಟ ಮೊದಲಬಾರಿಗೆ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿಯ ಜೊತೆ ಕೆಲಸ ಮಾಡುತ್ತಿರುವುದು ಇಡಿಯ ಚಿತ್ರ ತಂಡಕ್ಕೆ ಹೊಸ ಹುಮ್ಮಸ್ಸು ಮತ್ತು ಹುರುಪನ್ನು ನೀಡಿದೆ ಎನ್ನಲಾಗುತ್ತಿದೆ.

ಚಿತ್ರವನ್ನು ಹರೀಶ್ ಎಮ್ ಡಿ ಹಳ್ಳಿ ನಿರ್ದೇಶನ ಮಾಡುತ್ತಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರಿನ ಹಲವು ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸಪ್ತ ಪಾವೂರು, ಪತ್ರಕರ್ತ ವಿಶ್ವೇಶ್ವರ ಭಟ್, ಸುಧಾಕರ್, ರಾಜೇಶ್ ನಟರಂಗ, ಕೈಲಾಶ್, ಸಂಧ್ಯಾ ಅರಕೆರೆ ಮತ್ತು ಬೇಬಿ ಶ್ರೀ ನಟಿಸುತ್ತಿದ್ದಾರೆ. ಪ್ರದ್ಯೋತನ್ ಸಂಗೀತ ನಿರ್ದೇಶನ, ರವೀಂದ್ರನಾಥ್ ಛಾಯಾಗ್ರಹಣ, ಉಮೇಶ್ ಆರ್.ಬಿ ಸಂಕಲನ, ಆರ್. ಚಂದ್ರಶೇಖರ ಪ್ರಸಾದ್ ಮತ್ತು ಜೆ.ಎಂ.ಪ್ರಹ್ಲಾದ್ ಸಂವಾದವನ್ನು ನಿರ್ವಹಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರವನ್ನು ‘ಬಿಯಾಂಡ್ ವಿಷನ್ಸ್ ಸಿನಿಮಾಸ್’ ನಿರ್ಮಿಸುತ್ತಿದೆ.