ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, 1 ಕೋಟಿ ರೂಗಿಂತ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳ ಆದಾಯದ ಮೇಲೆ ಶೇ 10 ರಷ್ಟು ತೆರಿಗೆಯನ್ನು ಕಡ್ಡಾಯಗೊಳಿಸುವ ಮಸೂದೆಯನ್ನು ಶುಕ್ರವಾರ ಸಂಜೆ ರಾಜ್ಯ ವಿಧಾನ ಪರಿಷತ್ತಿನಲ್ಲಿ ಸೋಲಿಸಲಾಯಿತು. ರಾಜ್ಯ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಿದ ಎರಡು ದಿನಗಳ ನಂತರ ವಿಧಾನಪರಿಷತ್ತಿನಲ್ಲಿ ಮಸೂದೆಗೆ ಬಹುಮತ ದೊರೆಯಲಿಲ್ಲ.
ಈ ಮಸೂದೆಯು ದೇಶಾದ್ಯಂತ ಭಾರೀ ವಿವಾದವನ್ನು ಹುಟ್ಟುಹಾಕಿತ್ತು ಮತ್ತು ಕಾಂಗ್ರೆಸ್ ‘ಹಿಂದೂ ವಿರೋಧಿ’ ನೀತಿಗಳನ್ನು ಜಾರಿಗೆ ತಂದಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು (NDA) ಕರ್ನಾಟಕದ ವಿಧಾನ ಪರಿಷತ್ತಿನಲ್ಲಿಆಡಳಿತಾರೂಢ ಸರ್ಕಾರಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ. ಕಾಂಗ್ರೆಸ್ 30, ಬಿಜೆಪಿ 35, ಜೆಡಿಎಸ್ ನಿಂದ 8 ಎಂಎಲ್ ಸಿಗಳು ಮತ್ತು ಒಬ್ಬ ಸ್ವತಂತ್ರ ಅಭ್ಯರ್ಥಿ ಇದ್ದಾರೆ. ಪರಿಷತ್ತಿನಲ್ಲಿ ಒಂದು ಸ್ಥಾನ ಖಾಲಿ ಇದೆ.
ಕರ್ನಾಟಕ ಸರ್ಕಾರವು ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯಗಳ ದತ್ತಿ ತಿದ್ದುಪಡಿ ಮಸೂದೆ 2024’ ಅನ್ನು ಅಂಗೀಕರಿಸಿದ್ದು, 1 ಕೋಟಿ ರೂಗಿಂತ ಹೆಚ್ಚಿನ ಆದಾಯ ಹೊಂದಿರುವ ದೇವಸ್ಥಾನಗಳಿಂದ ಶೇ 10ರಷ್ಟು ತೆರಿಗೆ ಮತ್ತು ರೂ. 10 ಲಕ್ಷದಿಂದ ರೂ 1 ಕೋಟಿಯವರೆಗಿನ ಆದಾಯವಿರುವ ದೇವಸ್ಥಾನಗಳಿಂದ ಶೇ 5ರಷ್ಟು ಕಡ್ಡಾಯ ತೆರಿಗೆ ಸಂಗ್ರಹಣೆಯ ಅಂಶವನ್ನು ಹೊಂದಿದೆ.
ಸರ್ಕಾರದ ಈ ನೀತಿಗೆ ದೇಶಾದ್ಯಂತ ಭಾರೀ ವಿರೋಧವ್ಯಕ್ತವಾಗಿದೆ ಹಾಗೂ ರಾಜ್ಯದ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಕೆಂಡಕಾರಿದೆ.