ಮಂಗಳೂರು: ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಅನಂತ ಕೃಷ್ಣ (71) ಅವರು ಭಾನುವಾರ ಅಸೌಖ್ಯದಿಂದ ನಿಧನ ಹೊಂದಿದರು.
ಮೂಲತಃ ಬಂಟ್ವಾಳದವರಾದ ಅನಂತಕೃಷ್ಣ ಅವರು ಎಂ.ಎಸ್ಸಿ ಪದವೀಧರರು. ಮೊದಲು ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಹಿಂದೂಸ್ಥಾನ್ ಎರೊನಾಟಿಕ್ಸ್ ಲಿಮಿಟೆಡ್ ಸೇರಿದರು. ಬಳಿಕ 1971ರಲ್ಲಿ ಕರ್ನಾಟಕ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡರು.
ಬ್ಯಾಂಕ್ ನಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, 2000ರಲ್ಲಿ ಅಧ್ಯಕ್ಷ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಉನ್ನತ ಸ್ಥಾನ ಪಡೆದರು. 2009ರ ವರೆಗೂ ಬ್ಯಾಂಕ್ನಲ್ಲಿದ್ದು ಬಳಿಕ 2016ರ ವರೆಗೆ ನಾನ್ ಎಕ್ಸಿ ಕ್ಯೂಟಿವ್ ಚೇರ್ಮನ್ ಆಗಿದ್ದರು.
ಅವರ ನೇತೃತ್ವದಲ್ಲಿ ಬ್ಯಾಂಕ್ ದೇಶಾದ್ಯಂತ ಶಾಖೆಗಳನ್ನು ವಿಸ್ತರಿಸುವ ಕಾರ್ಯಕ್ಕೆ ಮುಂದಾಗಿತ್ತು. ಭಾರತೀಯ ಬ್ಯಾಂಕ್ಗಳ ಅಸೋಸಿಯಶನ್ನ ಗೌರವ ಕಾರ್ಯದರ್ಶಿಯೂ ಆಗಿದ್ದರು.
ಅವರು ಪತ್ನಿ, ಓರ್ವ ಪುತ್ರ, ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.