ಸೆ. 28ರಂದು ಕರ್ನಾಟಕ ಬಂದ್: ಉಡುಪಿ ಜಿಲ್ಲೆಯಲ್ಲಿ 14 ಸಂಘಟನೆಗಳಿಂದ ಬೆಂಬಲ ಘೋಷಣೆ

ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಮಸೂದೆ, ಭೂ ಸುಧಾರಣಾ ತಿದ್ದುಪಡಿ ಕಾಯಿದೆ, ವಿದ್ಯುತ್ ಕಾಯಿದೆ ಹಾಗೂ ಕಾರ್ಮಿಕ ಕಾಯಿದೆ ತಿದ್ದುಪಡಿ ವಿರೋಧಿಸಿ ಸೆಪ್ಟೆಂಬರ್ 28ರ ಸೋಮವಾರದಂದು ರೈತ ಸಂಘಗಳು ಇತರ ಸಂಘಟನೆಗಳ ಸಹಕಾರಗಳೊಂದಿಗೆ ಕರೆ ಕೊಟ್ಟಿರುವ ‘ಕರ್ನಾಟಕ ಬಂದ್’ ಗೆ ಉಡುಪಿ ಜಿಲ್ಲೆಯ 14 ಸಂಘಟನೆಗಳು ಬೆಂಬಲ ನೀಡಿವೆ.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಕೆಆರ್ ಎಸ್ ಪಕ್ಷ , ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ದಲಿತ ಸಂಘಟನೆಗಳು, ಸಹಬಾಳ್ವೆ, ಅಲ್ಪ ಸಂಖ್ಯಾತ ಸಂಘಟನೆಗಳು ಕೂಡ ಸಂಪೂರ್ಣ ಬೆಂಬಲ ಘೋಷಿಸಿವೆ.

ಜಿಲ್ಲೆಯಲ್ಲಿ ವರ್ತಕರು, ಟ್ಯಾಕ್ಸಿ ಚಾಲಕರು ಮಾಲೀಕರು, ಆಟೊ ಮಾಲೀಕರು-ಚಾಲಕರು, ಬಸ್ ಮಾಲೀಕರು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಬಂದ್ ಗೆ ಸ್ವಯಂ ಪ್ರೇರಿತವಾಗಿ ಬೆಂಬಲಿಸುವಂತೆ ವಿನಂತಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ 14 ಸಂಘಟನೆಗಳಿಂದ ಜಿಲ್ಲೆಯಾದ್ಯಂತ ಪ್ರತಿಭಟನಾ ಜಾಥಾ ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಬಿ. ಕುಶಾಲ್ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ದಲಿತ ಸಂಘಟನೆಯ ಮುಖ್ಯಸ್ಥ ಸುಂದರ್ ಮಾಸ್ಟರ್, ಕೆ.ಆರ್.ಎಸ್ ಪಕ್ಷದ ವಿನಿತಾ ಕಿರಣ್, ಕಾಂಗ್ರೆಸ್ ಕಿಸಾನ್ ಘಟಕದ ಶಶಿಧರ್ ಶೆಟ್ಟಿ, ಸಹಬಾಳ್ವೆಯ ಯಾಸೀನ್ ಮಲ್ಪೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಝೀಜ್ ಉದ್ಯಾವರ, ಶಶಿಧರ್ ಇದ್ದರು.