ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್: ರಾಜ್ಯ ರೈತ ಸಂಘ

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ರಾಜ್ಯ ರೈತ ಸಂಘವು ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.

ಇಂದು ಅಖಿಲ ಭಾರತ ಕೃಷಿ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 9ಕ್ಕೂ ಹೆಚ್ಚು ರೈತ ಸಂಘಟನೆಗಳು, 10ಕ್ಕೂ ಹೆಚ್ಚು ದಲಿತ‌ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ.

ಸೆ. 25ಕ್ಕೆ ರಾಷ್ಟ್ರೀಯ ಬಂದ್ ಗೆ ಕರೆ ನೀಡಿರುವುದರಿಂದ ಅಂದು  ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಸೇರಿ ಧರಣಿ ನಡೆಸಿ, ರಸ್ತೆ ತಡೆದು ಪ್ರತಿಭಟನೆ‌ ನಡೆಸುತ್ತೇವೆ ಎಂದು ಸಂಘವು ತಿಳಿಸಿದೆ.

ರೈತ‌ ಮುಖಂಡರಲ್ಲಿ ಗೊಂದಲ:
ಸೆ. 25 ಪ್ರತಿಭಟನೆ ಹಾಗೂ ಸೆ. 28ರ ಬಂದ್ ಬಗ್ಗೆ ರೈತ ಮುಖಂಡರಲ್ಲಿಯೇ ಗೊಂದಲ ಉಂಟಾಗಿದೆ. ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ 25ಕ್ಕೆ ಬೆಂಗಳೂರಿನಲ್ಲಿ ಮಾತ್ರ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್, ‘ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದಲ್ಲಿ 25ಕ್ಕೆ ಪ್ರತಿಭಟನೆ ನಡೆಸಲಾಗುವುದು. ರಸ್ತೆ ತಡೆ ನಡೆಸಿ, ಜೈಲ್ ಭರೋ ಚಳವಳಿ ನಡೆಯುತ್ತದೆ’ ಎಂದು ಹೇಳಿದರು. 28ರ ರಾಜ್ಯ ಬಂದ್ ಮಾಡುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದರು.