ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 33 ಟೊಯೊಟಾ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಎಸ್ಯುವಿಗಳನ್ನು ಖರೀದಿಸಲಿದೆ ಎಂದು ವರದಿಯಾಗಿದೆ. 33 ಸಚಿವರಿಗೆ ತಲಾ ಒಂದು ಗಾಡಿಯಂತೆ 9.9 ಕೋಟಿ ರೂ ಬಜೆಟ್ ಅನ್ನು ನಿಗದಿಪಡಿಸಲಾಗಿದೆ.
ಈ ನೇರ ಖರೀದಿಗೆ ಅನುಕೂಲವಾಗುವಂತೆ, ಕರ್ನಾಟಕ ಟ್ರಾನ್ಸ್ಪೆರೆನ್ಸಿ ಪಬ್ಲಿಕ್ ಪ್ರೊಕ್ಯೂರ್ ಮೆಂಟ್ (ಕೆಟಿಪಿಪಿ) ಕಾಯಿದೆಯಡಿಯಲ್ಲಿ 4(ಜಿ) ವಿನಾಯಿತಿಯನ್ನು ನೀಡಲಾಗಿದ್ದು, ಇದು ಟೆಂಡರ್ಗಳಿಲ್ಲದೆ ಗುತ್ತಿಗೆಗಳನ್ನು ನೀಡಲು ಸಹಾಯಮಾಡುತ್ತದೆ.
ನೂತನ ಸಚಿವರಿಗಾಗಿ ಅತ್ಯಾಧುನಿಕ ಎಸ್ ಯುವಿಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸಿರುವುದು ಕೆಲವೆಡೆ ಟೀಕೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ Innova Hycross ಟಾಪ್ ಟ್ರಿಮ್ನ ಆನ್-ರೋಡ್ ಬೆಲೆ ಅಂದಾಜು 39 ಲಕ್ಷ ರೂ.
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಎಸ್ಯುವಿಗಳನ್ನು ಖರೀದಿಸುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ” ಇದರಲ್ಲೇನು ತಪ್ಪು? ಸಚಿವರ ಸುರಕ್ಷತೆ ಮುಖ್ಯ ಏಕೆಂದರೆ ಅವರೂ ದೂರದ ಪ್ರಯಾಣ ಮಾಡಬೇಕಾಗಿದೆ. ವಾಸ್ತವವಾಗಿ, ಇತರ ರಾಜ್ಯಗಳಿಗಿಂತ ಭಿನ್ನವಾಗಿ, ನಮ್ಮಲ್ಲಿ ಯಾವುದೇ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್ಗಳಿಲ್ಲ. ಈಗಲೂ ಸಹ, ನಾನು ಸಾಮಾನ್ಯ, ವಾಣಿಜ್ಯ ವಿಮಾನದಲ್ಲಿ ಇಳಿದಿದ್ದೇನೆ ಎಂದು ಅವರು ಹೇಳಿದ್ದಾರೆ.
“ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತ್ರ ಮಾತನಾಡುತ್ತಿದೆ, ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ, ಕಾರುಗಳಿಗೆ ಹಣ ಎಲ್ಲಿದೆ?” ಎಂದು ಬಿಜೆಪಿ ಎಂಎಲ್ಸಿ ಸಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.