ಕಾರ್ಕಳ: ಕಾರ್ಕಳದ ಸಂಸ್ಕೃತಿ, ಕಲೆ, ಪ್ರವಾಸೋದ್ಯಮವನ್ನು ಪರಿಚಯಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಕಳ ಉತ್ಸವ 2022ಕ್ಕೆ ಈಗ ದಿನಗಣನೆ ಆರಂಭವಾಗಿದೆ. ಮಾ.10 ರಿಂದ 20ರವರೆಗೆ ಕಾರ್ಕಳ ಉತ್ಸವವನ್ನು ಆಯೋಜಿಸಲಾಗಿದೆ.
ಕರೋನ ಮೂರನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಈ ಕಾರ್ಕಳ ಉತ್ಸವದ ಸಿದ್ಧತೆಗೀಗ ಮತ್ತೆ ಜೀವ ಬಂದಿದೆ.
ಕಾರ್ಕಳ ಶಾಸಕ, ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಇಲ್ಲಿನ ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನಲ್ಲಿ ಯಕ್ಷ ರಂಗಾಯಣಕ್ಕೆ ಭೂಮಿ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತದೆ.ಸುಮಾರು 10 ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ಕೋಟಿ ಚೆನ್ನಯ್ಯ ಥೀಂ ಪಾರ್ಕ್, ಗಾಂಧಿ ಮೈದಾನ ಹಾಗೂ ಸ್ವರಾಜ್ ಮೈದಾನಗಳಲ್ಲಿ ಎಲ್ಲಾ ರಂಗಗಳ ವಿಭಿನ್ನತೆಯನ್ನು ಪ್ರದರ್ಶಿಸುವಂತೆ ಆಯೋಜಿಸಲಾಗುತ್ತಿದೆ.
ಏನೇನು ವಿಶೇಷವಿದೆ?
ಕಾರ್ಕಳ ಉತ್ಸವ ಕೇವಲ ನೃತ್ಯ ಸಂಗೀತ ಸಾಂಸ್ಕೃತಿಕ ಪ್ರದರ್ಶನಕ್ಕೆ ಸೀಮಿತವಾಗಿಲ್ಲ. ಹತ್ತಾರು ವೈಶಿಷ್ಟ್ಯಗಳಿಗೆ ಇಲ್ಲಿ ಜಾಗವಿದೆ. ಹೆಲಿಕಾಪ್ಟರ್ ವಿಹಾರ, ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ನಾಟಕಗಳು, ತುಳು ಸಾಹಿತ್ಯ ಅಕಾಡೆಮಿಯಿಂದ ತುಳುನಾಡ ಜಾನಪದ ವೈಭವ, ಗಾಳಿಪಟಗಳ ಹಾರಾಟ, ದೇಶ ವಿದೇಶದ ಶ್ವಾನಗಳ ಪ್ರದರ್ಶನ, ಗೂಡುದೀಪಗಳ ಪ್ರದರ್ಶನಗಳು ಇಲ್ಲಿವೆ.
ಕನ್ನಡ ಸಾಹಿತ್ಯ ವಿಚಾರ ಸಂಕಿರಣ, ಚಲನ ಚಿತ್ರೋತ್ಸವ, ಕರಕುಶಲ ವಸ್ತುಗಳ ಮೇಳ, ಚಿತ್ರಸಂತೆ, ಆಹಾರೋತ್ಸವ, ಗುಜರಾತ್, ಮಧ್ಯಪ್ರದೇಶ ಹಾಗೂ ಒಡಿಸ್ಸಾದ ಕಲಾವಿದರಿಂದ ಜನಪದ ನೃತ್ಯ, ಯಕ್ಷ ವೈಭವ, ಗಾನ ನಾಟ್ಯ, ಹಾಸ್ಯ ಮತ್ತು ತಾಳಮದ್ದಳೆ ಕಾರ್‍ಯಕ್ರಮಗಳು, ಹೆಸರಾಂತ ಹಿನ್ನೆಲೆಗಾಯಕರಿಂದ ದೇಶಭಕ್ತಿಗೀತೆಗಳು, ಸಿಡಿಮದ್ದು ಪ್ರದರ್ಶನಗಳು ಈ ಉತ್ಸವದಲ್ಲಿವೆ.
ಪ್ಲಾಸ್ಟಿಕ್ ಮುಕ್ತ ಉತ್ಸವವಿದು:
ಉತ್ಸವವು ಪ್ಲಾಸ್ಟಿಕ್ ಮುಕ್ತವಾಗಿರಲಿದೆ.10 ದಿನಗಳ ಕಾಲ ನಡೆಯುವ ಈ ಇಡೀ ಉತ್ಸವವನ್ನು ಪ್ಲಾಸ್ಟಿಕ್ ಮುಕ್ತವಾಗಿರುವಂತೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಕಾರ್ಕಳ ತಾಲೂಕು ವ್ಯಾಪ್ತಿಯ ಪ್ರತಿಯೊಂದು ಮನೆ, ವಾಣಿಜ್ಯ ಸಂಕೀರ್ಣಗಳು, ಮಂದಿರ, ಮಸೀದಿ, ಬಸದಿ, ಚರ್ಚ್ ಗಳು ಸೇರಿದಂತೆ ಎಲ್ಲಾ ಧಾರ್ಮಿಕ ತಾಣಗಳು, ಹಳ್ಳಿ, ಗ್ರಾಮ, ಪೇಟೆ ಪಟ್ಟಣಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ನಡೆಯಲಿದೆ.
ಬನ್ನಿ ಪಾಲ್ಗೊಳ್ಳಿ:
ಕಾರ್ಕಳದ ಜನರ ಪಾಲಿಗೆ ಇದೊಂದು ಹಿಂದೆಂದೂ ಕಂಡಿರದ ಅನುಭವವಾಗಲಿದೆ. ಆದ್ದರಿಂದ ಮನೆ, ಮನೆಗಳಲ್ಲಿ ಎಲ್ಲರೂ ಮೆಹಂದಿಯನ್ನಿಟ್ಟು ಈ ಮೆರವಣಿಗೆಗೆ ಆಗಮಿಸಿ ಸಾಂಸ್ಕೃತಿಕ ವೈಭವವನ್ನು ತುಂಬಬೇಕು. ಕಾರ್ಕಳ ಉತ್ಸವವನ್ನು ಸಂಭ್ರಮಿಸಬೇಕು.
—- ವಿ. ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರು