ಕಾರ್ಕಳ: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ಕಾರ್ಕಳದ ಯಕ್ಷ ರಂಗಾಯಣ ನಾಟಕೋತ್ಸವ ಈಗ ಸುದ್ದಿಯಲ್ಲಿದೆ. ಅಂದ ಹಾಗೆ ನಾಟಕಗಳ ಕಾರಣಕ್ಕೆ ಸುದ್ದಿಯಲ್ಲಿಲ್ಲ, ಬದಲಾಗಿ ಸಣ್ಣ ಮಕ್ಕಳನ್ನು ಸಭಾಂಗಣದ ತುಂಬ ತುಂಬಿಸಿ ಸದಭಿರುಚಿ ಪ್ರೇಕ್ಷಕರನ್ನು ನಿರಾಶೆ ಮಾಡುತ್ತಿರುವುದಕ್ಕೆ ಕಾರ್ಕಳ ರಂಗಾಯಣ ಸುದ್ದಿಯಲ್ಲಿದೆ. ಸ್ಥಳೀಯ ಖಾಸಗಿ ಶಾಲೆಯ, ವಸತಿ ಶಾಲೆಯ, ಕಾಲೇಜಿನ ಪ್ರಾಂಶುಪಾಲರು, ಮುಖ್ಯಸ್ಥರು ಕೆಲವು ವಿದ್ಯಾರ್ಥಿಗಳನ್ನು ವತ್ತಾಯಪೂರ್ವಕವಾಗಿ ಸಭಾಂಗಣದಲ್ಲಿ ತುಂಬಿಸಿರುವ ಮಾಹಿತಿ ವಿದ್ಯಾರ್ಥಿಗಳಿಂದಲೇ ದೊರೆತಿದ್ದು ರಂಗಾಸಕ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಜ. 19 ರಿಂದ ಕಾರ್ಕಳ ಕೋಟಿ ಚೆನ್ನಯ್ಯ ಪಾರ್ಕ್ ಬಯಲು ಸಭಾಂಗಣದಲ್ಲಿ ಸದಭಿರುಚಿಯ ನಾಟಕಗಳ ಪ್ರದರ್ಶನ ನಡೆಯುತ್ತಿದ್ದು ಕಾರ್ಕಳ ತಾಲೂಕಿನ ನಿಜವಾದ ನಾಟಕಾಭಿಮಾನಿಗಳು ಸೇರಿದಂತೆ ಆಸು ಪಾಸಿನ ತಾಲೂಕಿನ ಜನರು ನಾಟಕ ನೋಡುವ ಬಯಕೆಯಿಂದ ರಂಗಾಯಣದತ್ತ ಮುಖ ಮಾಡಿದ್ದರು.

ಜ. 21 ರಂದು ಬಹುನಿರೀಕ್ಷಿತ ನಿನಾಸಂ ನಾಟಕ ನೋಡಲು ಕಲಾಸಕ್ತರು, ದೂರದ ಊರುಗಳಿಂದ ಬಂದ ಸದಭಿರುಚಿಯ ಪ್ರೇಕ್ಷಕರು ಸಭಾಂಗಣದ ಒಳ ಪ್ರವೇಶಿಸುವತ್ತಿದ್ದಂತೆಯೇ ಆ ಪುಟ್ಟ ಸಭಾಂಗಣದಲ್ಲಿ ಎಲ್ಲೆಲ್ಲೂ ಶಾಲಾ ವಿದ್ಯಾರ್ಥಿಗಳನ್ನು ನೋಡಿ, ತಾವೇನಾದರೂ ತಪ್ಪಿ ಶಾಲಾ ವಾರ್ಷಿಕೋತ್ಸವಕ್ಕೆ ಬಂದೆವೋ ಎನ್ನುವ ಅನುಮಾನದಲ್ಲಿ ಸಂಘಟಕರನ್ನು ಕೇಳಿದಾಗ “ಅದು ನಾವೇ ಜನ ಜಾಸ್ತಿ ಕಾಣಲು ಮಕ್ಕಳನ್ನು ಕರೆಸಿದ್ದು” ಎನ್ನುವ ಉತ್ತರ ಬಂದಿದೆ.
ನಿಜವಾಗಿಯೂ ನಾಟಕ ನೋಡಲು ಬಂದ ರಂಗಾಸಕ್ತರಿಗೇ ಕುಳಿತುಕೊಳ್ಳಲು ಜಾಗವಿಲ್ಲ, ಏನೂ ಅರಿಯದ ಮಕ್ಕಳನ್ನು ತುಂಬಿಸುವ ಅಗತ್ಯ ಏನಿತ್ತು ಎಂದು ಹಲವಾರು ಪ್ರೇಕ್ಷಕರು ಆಕ್ರೋಶ ತೋಡಿಕೊಳ್ಳುವ ಸಂದರ್ಭ ಎದುರಾಗಿದ್ದು ವಿಷರ್ಯಾಸ.
ಮಕ್ಕಳ ಕೇಕೆ, ಕಮೆಂಟ್ ಗಳಿಗೆ ಪ್ರೇಕ್ಷಕರು ಸುಸ್ತು:
ನಿನಾಸಂ ನ ನಾಟಕ ” ಮಾಲತೀ ಮಾಧವ”, ಮಕ್ಕಳ ನಾಟಕವಲ್ಲ, ಪ್ರೀತಿ, ದಾಂಪತ್ಯ, ಯೌವ್ವನದ ಕುರಿತ ಸೂಕ್ಷ್ಮ ನೋಟವುಳ್ಳ ನಾಟಕವಿದು, ಇಂತಹ ನಾಟಕಕ್ಕೆ ಸ್ಥಳೀಯ ವಸತಿ ಶಾಲೆಯ ಮಕ್ಕಳ ದಂಡನ್ನೇ ಸಭಾಂಗಣದ ತುಂಬ ತುಂಬಿಸಿದ್ದರ ಪರಿಣಾಮ ನಿಜವಾದ ಪ್ರೇಕ್ಷಕರ ಮೇಲಾದದ್ದು ಮಾತ್ರ ದುರಂತ,
ನಾಟಕ ಸೀರಿಯಸ್ ತಿರುವು ಪಡೆದುಕೊಳ್ಳುವಾಗ ನೆರೆದ ಮಕ್ಕಳೆಲ್ಲಾ ಚಪ್ಪಾಳೆ, ಸಿಳ್ಳು ಹಾಕಲು ತೊಡಗಿದರು. ಜೊತೆಗೆ ಪಿ ಯು ಕಾಲೇಜಿನ ಮಕ್ಕಳ ಅಶ್ಲೀಲ ಜೋಕುಗಳೂ ಪ್ರೇಕ್ಷಕರನ್ನು ಕಂಗೆಡಿಸಿದವು. ಕಂಡ ದೃಶಕ್ಕೆಲ್ಲಾ ಚಪ್ಪಾಳೆ ಹೊಡೆದರು. ಈ ಚಪ್ಪಾಳೆಯ ಭರದಲ್ಲಿ ಕಲಾವಿದರ ಡೈಲಾಗುಗಳೇ ಕೇಳಿಸದೇ ಹೋಯಿತು, ನಾಟಕದ ವಾತಾವರಣ ಶಾಲಾ ವಾರ್ಷಿಕೋತ್ಸವದ ವಾತಾವರಣದಂತೆ ಬದಲಾಯಿತು.
ಇದರಿಂದ ನಿಜವಾದ ರಂಗಾಸಕ್ತರ ಧ್ಯಾನಸ್ಥತೆಗೆ ಅಡಚಣೆಯಾದದ್ದು ಮಾತ್ರವಲ್ಲ, ಮಕ್ಕಳ ಕೇಕೆ, ವಿಪರೀತ ಕಮೆಂಟ್ ಗಳಿಂದ ನಿಜವಾದ ಪ್ರೇಕ್ಷಕರು ಕಿವಿ ಮುಚ್ಚಿಕೊಳ್ಳುವಂತಾಯ್ತು. ಅಭಿನಯಿಸುತ್ತಿದ್ದ ಕಲಾವಿದರಿಗೂ ಸಂಗೀತಗಾರರಿಗೂ ಇದು ಅಡಚಣೆಯಾದದ್ದು ಅವರ ಮುಖ ಭಾವದಲ್ಲಿಯೇ ಗೋಚರಿಸಿತು ಎನ್ನುತ್ತಾರೆ ಗಮನಿಸಿದ ಪ್ರೇಕ್ಷಕರು. ನಾಟಕಕ್ಕೆ ಸ್ಥಳೀಯ ಕಾಲೇಜಿನ ಮಕ್ಕಳನ್ನೂ ಒತ್ತಾಯಪೂರ್ವಕವಾಗಿ ನಾಟಕಕ್ಕೆ ಕರೆಸಿಕೊಂಡಿದದ್ದರು ಎನ್ನುವ ಮಾಹಿತಿಯನ್ನು ಅಲ್ಲಿನ ವಿದ್ಯಾರ್ಥಿಗಳೇ ತೋಡಿಕೊಂಡಿದ್ದಾರೆ.
ಯಾವ ನಾಟಕಗಳಿಗೆ ಮಕ್ಕಳನ್ನು ಸೇರಿಸಬೇಕು, ಸೇರಿಸಬಾರದು ಎನ್ನುವ ಪ್ರಜ್ಞೆ ಇಲ್ಲದೇ ಕಾರ್ಯಕ್ರಮ ಆಯೋಜಿಸಿದರೆ ಹೀಗೆ ಆಗುತ್ತದೆ ಅಲ್ಲವೇ? ಒಟ್ಟಾರೆಯಾಗಿ ನಿಜವಾದ ಪ್ರೇಕ್ಷಕರು ಮಕ್ಕಳನ್ನು ಸೇರಿಸಲು ಹೇಳಿದ್ದ ಯಕ್ಷರಂಗಾಯಣದ ಮುಖ್ಯಸ್ಥರಿಗೆ, ವತ್ತಾಯಪೂರ್ವಕವಾಗಿ ಮಕ್ಕಳನ್ನು ತುಂಬಿಸಿ ನಾಟಕ ಹೌಸ್ ಫುಲ್ ಮಾಡಿದ್ದೇವೆ ಎಂದು ಬಿಂಬಿಸಿಕೊಂಡ ಪ್ರಾಂಶುಪಾಲರಿಗೆ ಹಿಡಿಶಾಪ ಹಾಕುವಂತಾಯ್ತು. ರಂಗೋತ್ಸವಗಳನ್ನು ನಡೆಸುವಲ್ಲಿ ಅದೆಷ್ಟು ಸೂಕ್ಷ್ಮತೆ ಮತ್ತು ಶಿಸ್ತುಬುದ್ಧತೆ ಬೇಕು ಎನ್ನುವುದನ್ನು ಆಯೋಜಕರು ಮೊದಲೇ ಗಂಭೀರವಾಗಿ ಯೋಚಿಸದೇ ಇದ್ದರೆ, ಹೀಗೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಸನ್ನಿವೇಶ ಸಾಕ್ಷಿ.
ನಾಟಕ ನೋಡಿದ ಪ್ರೇಕ್ಷಕರ ಅಭಿಪ್ರಾಯ ಇಲ್ಲಿದೆ ನೋಡಿ:
“ನಾನು ನಾಟಕ ನೋಡಲು ಬಂದಿದ್ದೆ.ಆದರೆ ಸಭಾಂಗಣದತ್ತಿರ ಕಾಲಿಡುತ್ತಿದ್ದಂತೆ, ಜನ ಫುಲ್ ಆಗಿದೆ, ವಾಪಾಸ್ ಹೋಗಿ ಎನ್ನುವಂತೆ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಿರ್ವಾಹಕರು ನನ್ನನ್ನ ನಡೆಸಿಕೊಂಡರು. ಆ ಮೇಲೆ ಸ್ಥಳೀಯ ವಸತಿ ಶಾಲೆಯ ಮಕ್ಕಳನ್ನೆಲ್ಲಾ ತುಂಬಿಸಿದ್ದಾರೆ ಎನ್ನುವುದು ಗೊತ್ತಾಯಿತು.
ಕೊನೆಗೆ ನಾನು ಚಾಪೆಯಲ್ಲಿ ಕಷ್ಟ ಪಟ್ಟು ಕುಳಿತು ನಾಟಕ ನೋಡಿದೆ. ಆದರೆ ವಿದ್ಯಾರ್ಥಿಗಳ ವಿಪರೀತ ಗದ್ದಲ, ಕಮೆಂಟ್ ಗಳಿಂದ ನಾಟಕ ನೋಡುವ ಉತ್ಸಾಹವೇ ಹಾಳಾಯಿತು. ಕಾರ್ಕಳ ರಂಗಾಯಣ ಪ್ರಜ್ಞಾವಂತ ಪ್ರೇಕ್ಷಕರನ್ನು ರೂಪಿಸಬೇಕೇ ಹೊರತು, ಮಕ್ಕಳನ್ನು ತುಂಬಿಸಿ ತಮ್ಮ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಬಿಂಬಿಸಲು ಈ ರೀತಿ ಮಾಡುವುದು ಸರಿಯಲ್ಲ, ಬೇಕಾದರೆ ಮಕ್ಕಳಿಗೇ ಮಕ್ಕಳ ನಾಟಕೋತ್ಸವ ಆಯೋಜಿಸಲಿ ಅದನ್ನು ಬಿಟ್ಟು ದೊಡ್ಡವರು ನೋಡಬೇಕಾದ ನಾಟಕವನ್ನು ದೊಡ್ಡವರಿಗಿಂತ ಜಾಸ್ತಿ ಮಕ್ಕಳನ್ನು ಸೇರಿಸಿ, ನಮ್ಮೆಲ್ಲರ ನಾಟಕ ನೋಡುವ ಖುಷಿಯನ್ನು ಹಾಳು ಮಾಡಬಾರದು. ಇನ್ನಾದರೂ ನಮ್ಮ ಪ್ರೀತಿಯ ಯಕ್ಷ ರಂಗಾಯಾಣ ಒಳ್ಳೆ ಪ್ರೇಕ್ಷಕರನ್ನು ಸೃಷ್ಟಿ ಮಾಡಲಿ
-ಅಂಜಲಿ ಬಿ.ಕೆ, ನೊಂದ ಪ್ರೇಕ್ಷಕರು
ಮಕ್ಕಳ ದೆಸೆಯಿಂದ ನಾಟಕ ನೋಡುವ ಖುಷಿಯೇ ಹಾಳಾಯ್ತು. ರಂಗಕ್ಕೆ ಎಷ್ಟು ಶಿಸ್ತು ಮುಖ್ಯವೋ ನೆರೆದ ಪ್ರೇಕ್ಷಕರಿಗೂ ಅಷ್ಟೇ ಶಿಸ್ತು ಬೇಕು, ಸೇರಿದ ಜನರು ನೂರೇ ಆಗಿರಲಿ ಅವರು ಖುಷಿಯಿಂದ ನೋಡ್ತಾರೆ, ಆದರೆ ಯಕ್ಷ ರಂಗಾಯಣದಲ್ಲಿಒತ್ತಾಯ ಪೂರ್ವಕವಾಗಿ ಸೇರಿಸಿದ ಮಕ್ಕಳಿಂದ ಇಡೀ ನಾಟಕ ಹಾಳಾಯ್ತು ಎನ್ನುವುದು ನೋವಿನ ಸಂಗತಿ. .ನನ್ನ ಪಕ್ಕ ಕುಳಿತ ವಿದ್ಯಾರ್ಥಿಗೆ “ಯಾವ ಶಾಲೆ” ಎಂದು ಕೇಳಿದೆ, “ಭುವನೇಂದ್ರ ವಸತಿ ಶಾಲೆ” ಎಂದ. ನಾಟಕ ಅರ್ಥವಾಗುತ್ತಿದೆಯಾ ಕೇಳಿದೆ, ಇಲ್ಲ ನಮ್ಮನ್ನು ಒತ್ತಾಯಪೂರ್ವಕವಾಗಿ ನಾಟಕ ನೋಡಲು ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದ. ಇದೆಲ್ಲಾ ಬೇಕಾ. ರಂಗಾಯಣದ ಮುಖ್ಯಸ್ಥರುಗಳೇ ಇನ್ನಾದರೂ ನಿಜವಾದ ಪ್ರೇಕ್ಷಕರನ್ನು ಸೇರಿಸಿ ಏನೂ ತಿಳಿಯದ ಮಕ್ಕಳನ್ನಲ್ಲ.
-ಜೆ.ಪಿ ಕಾಮತ್ ಕಾರ್ಕಳ-ನೊಂದ ಪ್ರೇಕ್ಷಕ