ಕಾರ್ಕಳ: ಹಟ್ಟಿಯಲ್ಲಿ ಕಟ್ಟಿದ್ದ ಎರಡು ಕರು ಸಹಿತ ಐದು ದನಗಳನ್ನು ಕಳ್ಳತನ ಮಾಡಿರುವ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ಎಂಬಲ್ಲಿ ನಡೆದಿದೆ.
ಈ ಬಗ್ಗೆ ನಿಟ್ಟೆ ಗ್ರಾಮದ ದರ್ಖಾಸು ಮನೆಯ ರಾಜೇಶ್ ಆಚಾರ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮನೆಯ ಹಟ್ಟಿಯಲ್ಲಿ ಜ.10ರ ರಾತ್ರಿ ಕಟ್ಟಿ ಹಾಕಿದ್ದ ಮೂರು ಕಪ್ಪು ಬಣ್ಣ ದನ ಹಾಗೂ ಎರಡು ಕಪ್ಪು ಬಣ್ಣದ ಹೆಣ್ಣು ಕರುವಿನ ಹಗ್ಗವನ್ನು ತುಂಡು ಮಾಡಿ, ಅವುಗಳನ್ನು ವಾಹನದಲ್ಲಿ ಹಾಕಿಕೊಂಡು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ 3 ದನಗಳ ಅಂದಾಜು ಮೌಲ್ಯ 15 ಸಾವಿರ ಹಾಗೂ 2 ಹೆಣ್ಣು ಕರುಗಳ ಅಂದಾಜು ಮೌಲ್ಯ 5 ಸಾವಿರ ಆಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.