ಉಡುಪಿ: ಮಾಹಿತಿ ಹಕ್ಕಿನ ಅಡಿಯಲ್ಲಿ ಕೋರಿದ್ದ ಮಾಹಿತಿ ನೀಡದ್ದಕ್ಕೆ ಕಾರ್ಕಳದ ಶ್ರೀ ಮಾರಿಯಮ್ಮ ದೇವಾಲಯದ ಸಾರ್ವಜನಿಕ ಮಾಹಿತಿ ಆಧಿಕಾರಿಯಾದ ಆಡಳಿತ ಮೋಕ್ತೇಸರ ಕೆ.ಪಿ. ಗೋಪಾಲಕೃಷ್ಣ ರಾವ್ ಅವರಿಗೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ರೂ.1 ಲಕ್ಷ ದಂಡ ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶಿಸಿದೆ.
ಅರ್ಜಿದಾರರಿಗೆ ನಾಲ್ಕು ಪ್ರಕರಣಗಳಲ್ಲಿ ರೂ.16 ಸಾವಿರ ಪರಿಹಾರ ನೀಡಬೇಕು ಎಂದೂ ನಿರ್ದೇಶನ ನೀಡಿದೆ. ಸೋಮನಾಥ ನಾಯಕ್ ಕೆ. ಎಂಬುವವರು ಅರ್ಜಿ ಸಲ್ಲಿಸಿ ದೇವಾಲಯಕ್ಕೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಕೇಳಿದ್ದರು.
ಶ್ರೀ ಮಾರಿಯಮ್ಮ ದೇವಾಲಯವು ಮುಜರಾಯಿ ದೇವಾಸ್ಥಾನವಾಗಿದ್ದು, ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಆಡಳಿತ ಮೋಕ್ತೇಸರ ಅವರನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನಾಗಿ ನೇಮಕ ಮಾಡಿದೆ. ಆದರೂ ಅವರು ಆಯೋಗದ ವಿಚಾರಣೆಗಳಿಗೆ ಹಾಜರಾಗಿಲ್ಲ ಮತ್ತು ಅರ್ಜಿದಾರರಿಗೆ ಮಾಹಿತಿಯನ್ನೂ ನೀಡುತ್ತಿರಲಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ದೇವಾಲಯಕ್ಕೆ ಸರ್ಕಾರದಿಂದ ವಾರ್ಷಿಕ ರೂ.60 ಸಾವಿರ ವರ್ಷಾಸನ ಹಾಗೂ 2022 ರಲ್ಲಿ ದೇವಾಲಯ ನವೀಕರಣಕ್ಕೆ ಸರ್ಕಾರದಿಂದ ರೂ.25 ಲಕ್ಷ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಮಾಹಿತಿ ನೀಡುವಂತೆ ಆಯೋಗ ಆದೇಶ ನೀಡಿದ್ದರೂ ಸಾರ್ವಜನಿಕ ಮಾಹಿತಿ ಆಧಿಕಾರಿ ಗೋಪಾಲಕೃಷ್ಣರಾವ್ ಅವರು ಆ ಆದೇಶವನ್ನು ಪಾಲಿಸಿರಲಿಲ್ಲ. ಆದ್ದರಿಂದ ಪ್ರತಿ ಪ್ರಕರಣಕ್ಕೆ ತಲಾ ರೂ.25 ಸಾವಿರ ದಂಡ ಹಾಗೂ ಎರಡು ಪ್ರಕರಣದಲ್ಲಿ ತಲಾ ರೂ.5 ಸಾವಿರ ಪರಿಹಾರ ಹಾಗೂ ಉಳಿದೆರಡು ಪ್ರಕರಣದಲ್ಲಿ ತಲಾ ರೂ.3 ಸಾವಿರ ಪರಿಹಾರ ನೀಡುವಂತೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಆದೇಶ ನೀಡಿದ್ದಾರೆ.
















