ಕಾರ್ಕಳ: ಎಸ್ ಸಿಡಿಸಿಸಿ ಬ್ಯಾಂಕ್ ಅಜೆಕಾರು ಶಾಖೆಯ ಸ್ಥಳಾಂತರ ಸಮಾರಂಭ

ಕಾರ್ಕಳ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್ ಸಿಡಿಸಿಸಿ) ಅಜೆಕಾರು ಶಾಖೆಯ ಸ್ಥಳಾಂತರ ಸಮಾರಂಭವು ಅಜೆಕಾರು ಪ್ರಗತಿ ಟ್ರೇಡ್ ಸೆಂಟರ್ ನಲ್ಲಿ ಇಂದು ನಡೆಯಿತು.

ನೂತನ ಸ್ಥಳಾಂತರಿತ ಶಾಖೆಯನ್ನು ಉದ್ಘಾಟಿಸಿ ಇಂಧನ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ರೈತರ ಸಾಲ ಮನ್ನಾದಂತಹ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಕಾರಿ ಸಂಘಗಳು ಸಹಕಾರಿಯಾಗಿದ್ದು, ಶೂನ್ಯ ಬಡ್ಡಿದರದಲ್ಲಿ ಸಾಲಯೋಜನೆಗಳು ನೀಡುತ್ತಿವೆ. ಕೇಂದ್ರ ಸರಕಾರ ಸಹಕಾರ ಸಚಿವಾಲಯವನ್ನು ಸ್ಥಾಪಿಸುತ್ತಿದೆ. ಹೊಸ ಚಿಂತನೆಗಳಿಗೆ ಹೊಸ ಮೈಲಿಗಲ್ಲನ್ನು ಉಂಟುಮಾಡಲು, ಸಹಕಾರಿ ರಂಗದ ನೆರವು ಅಗತ್ಯವಿದೆ‌. ಸರ್ಕಾರದ ಸಹಕಾರಿ ರಂಗದ ಎಲ್ಲ ಲಾಭಗಳನ್ನು ಜನರು ಪಡೆದುಕೊಳ್ಳುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಮಾತನಾಡಿ, ನಬಾರ್ಡ್ ನಿಂದ ಅವಿಭಜಿತ ದಕ್ಷಿಣ ಕನ್ನಡ ಹಾಗೂ ಇತರ ಎರಡು ಜಿಲ್ಲೆಗಳನ್ನು ಸೇರಿಸಿ ಎರಡು ಸಾವಿರ ಕೋಟಿ ಹಣವನ್ನು ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡಿರುವುದು ಬಹಳ ಹೆಮ್ಮೆಯ ವಿಚಾರ. ಅಜೆಕಾರು ಗ್ರಾಮದ ಜನ ಶಾಖೆ ಸ್ಥಳಾಂತರ ಸಮಯದಲ್ಲಿ ₹3.5 ಕೋಟಿ ಠೇವಣಿ ಹಣವನ್ನು ಇಟ್ಟು ಶಾಖೆ ಯಶಸ್ಸು ಗೊಳಿಸಲು ಸಹಕಾರ ನೀಡಿದ್ದಾರೆ ಎಂದರು.

ಅಜೆಕಾರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಭವಾನಿ ಶಂಕರ್, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಬಜಗೋಳಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉದಯ ಎಸ್. ಕೋಟ್ಯಾನ್, ದೇವಸ್ಯ ಶಿವರಾಮ ಶೆಟ್ಟಿ, ಬ್ಯಾಂಕ್ ನಿರ್ದೇಶಕರುಗಳಾದ ಭಾಸ್ಕರ್ ಕೋಟ್ಯಾನ್, ವಾದಿರಾಜ್ ಶೆಟ್ಟಿ, ಶಶಿಕುಮಾರ್ ರೈ, ಸುನೀಲ್ ಬಜಗೋಳಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ, ಗ್ರಾಪಂ ಅಧ್ಯಕ್ಷೆ ಜ್ಯೋತಿ ಪೂಜಾರಿ ಉಪಸ್ಥಿತರಿದ್ದರು.

ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಿನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನೂತನ ಸಚಿವ ವಿ. ಸುನಿಲ್ ಕುಮಾರ್ ಅವರನ್ನು ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಅನೇಕ ಸ್ವಸಹಾಯ ಸಂಘಗಳಿಗೆ ಚಾಲನೆ ನೀಡಲಾಯಿತು. ಸಾಲಪತ್ರಗಳ ವಿತರಣೆ ಮಾಡಲಾಯಿತು.