ಉಡುಪಿ: ಕಂಚಿನ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ನಕಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿದ್ದರಿಂದ ಜನರ ನಂಬಿಕೆಗೆ ಧಕ್ಕೆಯಾಗಿದ್ದು ಮತ್ತೆ ಈ ಎಲ್ಲಾ ಅಪವಾದಗಳನ್ನು ಕಳೆಯಲು ಬೈಲೂರಿನಲ್ಲಿ ಅಸಲಿ ಕಂಚಿನ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಜನರ ನಂಬಿಕೆಯನ್ನು, ಧರ್ಮವನ್ನು, ಸತ್ಯವನ್ನು, ನ್ಯಾಯವನ್ನು ಉಳಿಸಬೇಕಾದರೆ ಮತ್ತೆ ಅಲ್ಲಿ ಪರಶುರಾಮ ಪ್ರತಿಮೆ ನಿರ್ಮಾಣ ಮಾಡುವುದು ಅನಿವಾರ್ಯ ಎಂದು ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಈ ಬಗ್ಗೆ ಈ ಹಿಂದೆಯೂ ನಾನು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ. ಧಾರ್ಮಿಕ ಪಂಡಿತರು, ತಜ್ಞರ ಅಭಿಪ್ರಾಯ ಪಡೆದು ಅಷ್ಟಮಂಗಲ ಪ್ರಶ್ನೆಯ ಮೂಲಕ ಇಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಾಣ ಆಗಬೇಕು. ಪೋಲಿಸರ ತನಿಖೆಯಿಂದ ಬೈಲೂರಿನಲ್ಲಿ ಕಂಚಿನದ್ದಲ್ಲದ ನಕಲಿ ಪ್ರತಿಮೆ ನಿರ್ಮಾಣ ಮಾಡಿರುವುದು ಸಾಬೀತಾಗಿದೆ. ಮತ್ತೆ ಅಲ್ಲಿ ಅಸಲಿ ಕಂಚಿನ ಪ್ರತಿಮೆ ನಿರ್ಮಿಸುವ ಸಲುವಾಗಿ ನಾನು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇನೆ. ಪರಶುರಾಮ ಪ್ರತಿಮೆ ನಿರ್ಮಾಣ ಆಗಲೇಬೇಕು ಎನ್ನುವ ನನ್ನ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಿಂದ ಸುನೀಲ್ ಕುಮಾರ್ ಆತಂಕಿತರಾಗಿದ್ದಾರೆ. ಈಗಾಗಲೇ ಜನರನ್ನು ಮೋಸಗೊಳಿಸಿದ ಪಾಪ ಪ್ರಜ್ಞೆ ಅವರನ್ನು ಕಾಡುತ್ತಿದ್ದು, ನನ್ನ ಅರ್ಜಿಗೆ ಅವರು ವಿನಾಕಾರಣ ವಿರೋಧಿಸುತ್ತಿದ್ದಾರೆ. ಸುನೀಲ್ ಕುಮಾರ್ ಮತ್ತು ಅವರ ಗ್ಯಾಂಗ್ ಎಷ್ಟೇ ವಿರೋಧಿಸಿದರೂ ಬೈಲೂರಿನಲ್ಲಿ ಮತ್ತೆ ಪರಶುರಾಮ ಪ್ರತಿಮೆ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ಆರು ತಿಂಗಳಿನಿಂದ ತಯಾರಾಗುತ್ತಿರುವ ಮೂರ್ತಿ ಕೂಡ ಕಳಪೆ ಗುಣಮಟ್ಟದಿಂದ ಕೂಡಿದ ಹಿತ್ತಾಳೆಯ ಮೂರ್ತಿ ಎಂದು ತಿಳಿದುಬಂದಿದೆ.
ಸುನಿಲ್ ಕುಮಾರ್ ಗೊಂದಲ ಸೃಷ್ಟಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಇದೀಗ ಮತ್ತೆ ಮೂರ್ತಿಯ ಕಂಪ್ಲೀಟ್ ಮಾಡಿ ಉಮ್ಮಿಕಲ್ ಬೆಟ್ಟವನ್ನು ಪ್ರಸೋದ್ಯಮವನ್ನಾಗಿ ಬೆಳೆಸುತ್ತೇವೆ ಎನ್ನುತ್ತಿದ್ದಾರೆ. ಅವರು ಇನ್ನೊಂದು ಚುನಾವಣೆ ಕೂಡ ಇದರಲ್ಲೇ ಬೇಕೆಂದು ಬಯಸುತ್ತಿದ್ದಾರೆ. ಯಾಕೆಂದರೆ ಬೇರೆ ಯಾವುದೇ ಅವರಿಗೆ ಕಾಣುತ್ತಿಲ್ಲ. ಭಾರತ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಧಾರ್ಮಿಕ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ ಏಕೈಕ ವ್ಯಕ್ತಿ ಸುನಿಲ್ ಕುಮಾರ್. ಅವರು ಸುಳ್ಳು ಈಗ ಬಯಲಾಗಿದೆ. ಅವರ ಪಟಲಾಮ್ ಬಿಟ್ಟರೆ, ಬೇರೆ ಯಾರು ಅವರನ್ನು ನಂಬುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಗುಡುಗಿದರು.












