ಬರಹ: ಸುವರ್ಚಲಾ ಬಿ.ಸಂ.
ಒಂದಷ್ಟು ದಿನ ತಣ್ಣಗಿದ್ದ ಕಾರ್ಕಳದ ಯಕ್ಷರಂಗಾಯಣ ಈಗ ಹೊಸ ನಿರ್ದೇಶಕರಾದ ವೆಂಕಟರಮಣ ಐತಾಳ್ ನೇತೃತ್ವದಲ್ಲಿ ಮತ್ತೆ ಸದ್ದುಮಾಡತೊಡಗಿದೆ. ಕಾರ್ಕಳದ ರಂಗಾಸಕ್ತರ ಮನದಣಿಸಲು “ತಿಂಗಳ ನಾಟಕ” ಎಂಬ ಪರಿಕಲ್ಪನೆಯಲ್ಲಿ ಪ್ರತಿ ತಿಂಗಳು ಬೇರೆ ಬೇರೆ ತಂಡಗಳನ್ನು ಕರೆಸಿ ನಾಟಕ ಮಾಡಿಸುವ ಮೂಲಕ ಮೊದಲ ಹೆಜ್ಜೆಯನ್ನಿಟ್ಟಿದೆ.
ನವೆಂಬರ್ ತಿಂಗಳ ಕೊನೆಯ ದಿನ ತಣ್ಣನೆ ಮುಸ್ಸಂಜೆಯಲಿ ನಕ್ಷತ್ರಗಳ ಬೆಳಕಿನಲಿ ಪ್ರಸ್ತುತಿಯಾದ ನಾಟಕ ಕುವೆಂಪು ಅವ್ರ ಕಾನೂರು ಹೆಗ್ಗಡತಿ ಕಾದಂಬರಿಯ ಮುಖ್ಯಪಾತ್ರ ಸುಬ್ಬಮ್ಮಳನ್ನು ಬಿಂಬಿಸುವ ಏಕವ್ಯಕ್ತಿ ನಾಟಕ “ಸುಬ್ಬಮ್ಮ”.
ಶಿರಸಿಯ ನಾಟ್ಯರಂಗ ಪ್ರದರ್ಶಕ ಕಲಾಕೇಂದ್ರದ ಯತೀಶ್ ಕೊಳ್ಳೇಗಾಲ ಅವರ ಸಲಹೆ, ನಿರ್ದೇಶನದೊಂದಿಗೆ ಸುಬ್ಬಮ್ಮಳಾಗಿ ಏಕವ್ಯಕ್ತಿ ಪ್ರದರ್ಶನ ನೀಡಿದವರು ಶ್ರೀಮತಿ ರಾಧಾರಾಣಿ.

ಯಾವುದೇ ಹಿನ್ನಲೆ ಸಂಗೀತವಿಲ್ಲದೇ, ಬಣ್ಣ ಬಣ್ಣದ ಬೆಳಕುಗಳಿಲ್ಲದೇ, ಭಾಷೆ, ಮಾತುಗಾರಿಕೆ, ಅಭಿನಯ, ಕಣ್ಣುಗಳಲ್ಲೇ ಭಾವಾಭಿವ್ಯಕ್ತಿಯ ಮೂಲಕ ಒಂದು ಗಂಟೆಗಳ ಕಾಲ ನೋಡುಗರನ್ನು ಸೆರೆಹಿಡಿದಿಟ್ಟ ಪಾತ್ರ ಸುಬ್ಬಮ್ಮನದು. ಅಷ್ಟು ದೊಡ್ಡ ಕಾದಂಬರಿಯ ಮುಖ್ಯ ಪಾತ್ರವನ್ನು ಕೇವಲ ಒಂದು ಗಂಟೆಯಲ್ಲಿ ಪ್ರಸ್ತುತ ಪಡಿಸುವುದು ಸುಲಭದ ಮಾತಲ್ಲ. ಆದರೆ ನವರಸಗಳೂ ಮಿಳಿತವಾದ ಈ ಪಾತ್ರದ ಮೂಲಕ ಕರಾವಳಿಯ ಪ್ರೇಕ್ಷಕರನ್ನು ಮಲೆನಾಡಿನ ಕಾನೂರು ಎಂಬ ಸಣ್ಣ ಹಳ್ಳಿಗೆ ಕರೆದೊಯ್ದು, ತಾನೇ ಸುಬ್ಬಮ್ಮನ ಮನೆಗೆ ಹೋಗಿ ಅಲ್ಲಿ ನಡೆಯುತ್ತಿರುವ ಕತೆ ನೋಡುತ್ತಿದ್ದೇನೋ ಎಂಬಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಮಾಡಿದ್ದು ನಟಿಯ ಚಾಕಚಕ್ಯತೆ. ಅದಕ್ಕೆ ಪೂರಕವಾಗಿದ್ದು ಕೋಟಿ ಚೆನ್ನಯ್ಯ ಥೀಂ ಪಾರ್ಕಿನ ಪರಿಸರ ಹಾಗೂ ತಣ್ಣನೆಯ ವಾತಾವರಣ.

ಒಟ್ಟಾರೆಯಾಗಿ ಯಕ್ಷರಂಗಾಯಣಕ್ಕೆ ಒಂದಷ್ಟು ಜೀವ ಬಂದದ್ದು, ಸಮಯಕ್ಕೆ ಸರಿಯಾಗಿ ಯಾವುದೇ ವೇದಿಕೆ ಕಾರ್ಯಕ್ರಮಗಳಿಲ್ಲದೇ, ಸಣ್ಣ ಆಸಕ್ತ ಜನರ ಗುಂಪಿಗೆ ಅದ್ಭುತ ನಾಟಕ ತಂಡಗಳನ್ನು ಕರೆಸಿ ನಾಟಕದ ರಸದೌತಣ ನೀಡಲು ಪ್ರಾರಂಭಿಸಿದ್ದು ನಾಟಕ ರಸಿಕರ ಮನಸ್ಸಿಗೆ ಮುದ ನೀಡಿದೆ.












