ಕಾರ್ಕಳ: ಕಾದ ಇಳೆಗೆ ತಂಪೆರೆದ ಮಳೆ

ಉಡುಪಿ: ಕಾರ್ಕಳ ತಾಲೂಕಿನ ಮಾಳ, ಬಜಗೋಳಿ ಪರಿಸರದಲ್ಲಿ ಶನಿವಾರ ಸಂಜೆ ಅಕಾಲಿಕ ಮಳೆ ಸುರಿದಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ.

ಒಂದು ತಾಸುಗಿಂತಲೂ‌ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿ ಗಾಳಿಯಿಂದ ತಪ್ಪಿಸಿಕೊಳ್ಳಲು ಜನ ಹರಸಾಹಸ ಪಡುತ್ತಿದ್ದಾರೆ. ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬರಲಾಗುತ್ತಿಲ್ಲ.

ಕಾದ ಹೆಂಚಿನಂತಾಗಿದ್ದ ಭೂಮಿಗೆ ಮಳೆಯ ಹನಿಗಳ ಸ್ಪರ್ಶವಾಯಿತು. ಇಡೀ ದಿನ ಉರಿ ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಸಂಜೆ ಹೊತ್ತಿಗೆ ಸುರಿದ ಮಳೆ ತುಸು ತಂಪೆರೆಯಿತು. ಈ ವರ್ಷದ ಮೊದಲ ಮಳೆಯ ಹನಿಗಳ ಕಂಡು ಖುಷಿಪಟ್ಟರು. ಕೆಲವರು ಮಳೆಯಲ್ಲಿ ನೆನೆಯುತ್ತ ನಡೆದರೆ, ಇನ್ನೂ ಕೆಲವರು ಕೊಡೆ ಹಿಡಿದು ಸಾಗಿದರು.