ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ದ ಮಾತಾಡಿ ಸಂವಿಧಾನವನ್ನು ಮುಖ್ಯಾಧಿಕಾರಿ ನಿಂದನೆ ಮಾಡಿದ್ದಾರೆ, ತಮಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಕಾರ್ಕಳದ ದಲಿತ ಉಪನ್ಯಾಸಕಿ ಸವಿತಾಕುಮಾರಿ ಪೊಲೀಸ್ ಠಾಣೆಗೆ ದೂರು ನೀಡಿ ಅವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಶೀಘ್ರವೇ ಮುಖ್ಯಾಧಿಕಾರಿ ರೇಖಾ ಶೆಟ್ಟಿಯನ್ನು ಕೂಡಲೇ ಬಂದಿಸಬೇಕು, ತಪ್ಪಿದಲ್ಲಿ ಇದರ ವಿರುದ್ದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಇದರ ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರ್ ತಿಳಿಸಿದ್ದಾರೆ.
ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರಿಗೆ ಸರಕಾರವು ಈ ಹಿಂದೆ ಕಾರ್ಕಳ ಪುರಸಭೆಯಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್‌ಗೆ ವರ್ಗಾವಣೆ ನೀಡಿ ಆದೇಶ ಹೊರಡಿಸಿದ್ದು ಇವರು ಈ ವರ್ಗಾವಣೆ ಆದೇಶದ ವಿರುದ್ದ ಧಾರವಾಡ ಉಚ್ಚ ನ್ಯಾಯಲಯದಲ್ಲಿ ಆದೇಶ ತಡೆ ಹಿಡಿಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಮಾನ್ಯ ಘನ ನ್ಯಾಯಾಲಯವು ತಿರಸ್ಕರಿಸಿ ಸರಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಮುಖ್ಯಾಧಿಕಾರಿ ರೇಖಾ ಶೆಟ್ಟಿ ಮಾನ್ಯ ನ್ಯಾಯಲಯದ ಆದೇಶವನ್ನು ಉಲ್ಲಂಘಿಸಿ, ನ್ಯಾಯಾಲಯಕ್ಕೆ ಅಪಮಾನ ಮಾಡಿರುತ್ತಾರೆ.
ಅಲ್ಲದೇ ಕಾನೂನು ಬಾಹಿರವಾಗಿ ಕಾರ್ಕಳ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ ಇವರನ್ನು ಕರ್ತವ್ಯದಿಂದ ವಜಾಗೊಳಿಸಬೆಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭಿಮಘರ್ಜನೆ ಸಂಘಟನೆ ಆಗ್ರಹಿಸಿದೆ.ತಪ್ಪಿದಲ್ಲಿ ಇದರ ವಿರುದ್ದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಸಂಚಾಲಕರಾದ ಉದಯ್ ಕುಮಾರ್ ತಲ್ಲೂರ್ ತಿಳಿಸಿದ್ದಾರೆ
ಉಡುಪಿ ಜಿಲ್ಲಾ ಸಂಚಾಲಕರಾದ ಚಂದ್ರ ಅಲ್ತಾರ್, ಮಂಗಳೂರು ಜಿಲ್ಲಾ ಸಂಚಾಲಕರಾದ ಪ್ರಭಾಕರ್ ಮೂಡುಬಿದ್ರೆ, ಕಾರ್ಕಳ ತಾಲೂಕು ಸಮಿತಿಯ ಸುರೇಂದ್ರ ಬಜಗೋಳಿ, ಸುರೇಶ್ ಮಾಳ, ಗಣೇಶ್ ಬಜಗೋಳಿ, ಮತ್ತು ಉದಯ್ ಮಾರ್ನಾಡ್, ಸದಾನಂದ ನೆಟ್ಟೊಡೀ ಇವರೂ ಕೂಡಲೇ ಮುಖ್ಯಾಧಿಕಾರಿ ರೇಖಾ ಶೆಟ್ಟಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.