ಕಾರ್ಕಳ: ಅಪ್ರಾಪ್ತ ಮೂಕಿ ಬಾಲಕಿಯ ಮೇಲಿನ ಅತ್ಯಾಚಾರ ಸಾಬೀತು; ಅಪರಾಧಿಗೆ ಫೆ. 22ಕ್ಕೆ ಶಿಕ್ಷೆ ಪ್ರಕಟ

ಉಡುಪಿ: ಕಳೆದ ಮೂರು ವರ್ಷಗಳ ಹಿಂದೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಅಂಗವಿಕಲ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಲು ಕಾರಣನಾದ ಆರೋಪದಡಿ ಬಂಧಿತನಾಗಿದ್ದ ಆರೋಪಿಯ ಅಪರಾಧ ಸಾಬೀತಾಗಿದ್ದು, ಫೆ. 22ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ (FTSC-1) ನ್ಯಾಯಾಧೀಶ ಯಾದವ್ ವನಮಾಲಾ ಆನಂದರಾವ್ ಆದೇಶಿಸಿದ್ದಾರೆ.

ಘಟನೆಯ ವಿವರ: ಕಾರ್ಕಳದ ನಿವಾಸಿ ಹರೀಶ್ (33) ಎಂಬಾತ 2018ರ ಡಿಸೆಂಬರ್ ತಿಂಗಳಿನಲ್ಲಿ ತನ್ನ ಮನೆ ಸಮೀಪದ 15 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಸಂತ್ರಸ್ತ ಬಾಲಕಿಗೆ ಕಿವಿ ಕೇಳದ, ಮಾತನಾಡಲು ಬಾರದ ಹಿನ್ನೆಲೆ ಈ ಪ್ರಕರಣ ಬೆಳಕಿಗೆ ಬಂದಿರಲಿಲ್ಲ.

2019ರಲ್ಲಿ ಒಂದು ದಿನ ರಾತ್ರಿ ಆಕೆ ಹೊಟ್ಟೆನೋವಿನಿಂದ ಬಳಲಿ ತೀವ್ರ ರಕ್ತಸ್ರಾವ ಉಂಟಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಪೋಷಕರು ವಿಚಾರಿಸಿದಾಗ ಆಗ ಘಟನೆ ಬೆಳಕಿಗೆ ಬಂದಿತ್ತು. ಸಂತ್ರಸ್ತೆಯ ತಾಯಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಬಾಲಕಿ 7ನೇ ತರಗತಿ ಓದಿದ್ದು ಪಕ್ಕದ ಮನೆಯ ಆರೋಪಿಯನ್ನು ಕೈ ಸನ್ನೆ ಹಾಗೂ ಬರವಣಿಗೆ ಮೂಲಕ ಗುರುತಿಸಿದ ಹಿನ್ನೆಲೆ ಫೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಅಂದಿನ ಕಾರ್ಕಳ ಪ್ರಭಾರ ಸಿಪಿಐ ಮಹೇಶ್ ಪ್ರಸಾದ್ ಮೊದಲಿಗೆ ತನಿಖೆ ನಡೆಸಿದ್ದು, ಬಳಿಕ ಸಿಪಿಐ ಸಂಪತ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 22 ಸಾಕ್ಷಿಗಳ ಪೈಕಿ ಸಂತ್ರಸ್ತೆ ತಾಯಿ ಸೇರಿದಂತೆ 13 ಮಂದಿ ಸಾಕ್ಷ್ಯ ನುಡಿದಿದ್ದರು. ಡಿ.ಎನ್.ಎ ವರದಿ ಕೂಡ ಅಭಿಯೋಜನೆಗೆ ಪೂರಕವಾಗಿತ್ತು.

ವಿಶೇಷ ರೀತಿಯಲ್ಲಿ ಸಾಕ್ಷ್ಯ ವಿಚಾರಣೆ:
ಮೂಗಿ, ಕಿವುಡ ಬಾಲಕಿ ನ್ಯಾಯಾಲಯದಲ್ಲಿ ತನ್ನ ಹೇಳಿಕೆ ದಾಖಲಿಸಲು ಉಡುಪಿ ಜಿಲ್ಲಾಸ್ಪತ್ರೆಯ ಆಗಿನ ಆಡಿಯಾಲಜಿ ವಿಭಾಗದ ಕಮಲಾ ಬೊಯರ್ ಸಹಕರಿಸಿದ್ದರು. ಅಲ್ಲದೇ ಮಣಿಪಾಲ ಕೆಎಂಸಿ ಆಸ್ಪತ್ರೆಯ ಸ್ಪೀಚ್ ಆಂಡ್ ಥೆರಪಿ ವಿಭಾಗದ ಡಾ. ಕಿಶನ್, ಡಾ. ಭಾರ್ಗವಿ ಪಿ.ಜಿ. ಅವರು ನ್ಯಾಯಾಲಯದ ಆದೇಶದಂತೆ ಸಂತ್ರಸ್ತ ಬಾಲಕಿ ಸಾಕ್ಷಿ ವಿಚಾರಣೆ ನಡೆಸಲು ನ್ಯಾಯಾಲಯ ಮತ್ತು ಅಭಿಯೋಜನೆಗೆ ಪೂರಕವಾಗಿ ಸಹಕಾರ ನೀಡಿದ್ದರು.
ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.