ಕಾರ್ಕಳ ಪ್ರಧಾನ ಮಂತ್ರಿ ಆವಾಸ್ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಮೇ 31: ಕೇಂದ್ರ ಸರ್ಕಾರವು 2019-20 ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (ನಗರ) ಹೌಸಿಂಗ್ ಫಾರ್ ಆಲ್ ಯೋಜನೆಯನ್ನು ಜಾರಿಗೊಳಿಸಿರುತ್ತದೆ.  ಯೋಜನೆ ಉದ್ದೇಶವು  ಆರ್ಥಿಕ ದುರ್ಬಲ ವಿಭಾಗ, ಕಡಿಮೆ ಆದಾಯ ಗುಂಪು, ಮಧ್ಯಮ ಆದಾಯ-I, ಮಧ್ಯಮ ಆದಾಯ-II ವರ್ಗಕ್ಕೆ ಸೇರಿದ ಅರ್ಹ ಫಲಾನುಭವಿಗಳಿಗೆ ಬ್ಯಾಂಕುಗಳು, ಫೈನಾನ್ಸ್ ಕಂಪನಿಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಬಡ್ಡಿ ಸಹಾಯಧನದ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಅವಕಾಶ ಕಲ್ಪಿಸಿದೆ.

ಆರ್ಥಿಕ ದುರ್ಬಲ ವರ್ಗದವರಿಗೆ ವಾರ್ಷಿಕ ಆದಾಯ 3 ಲಕ್ಷದ ವರೆಗೆ ಕಟ್ಟಡ ವಿಸ್ತೀರ್ಣ 30 ಚದರ ಮೀಟರ್‍ವರೆಗೆ ಮನೆ ನಿರ್ಮಿಸಲು 6 ಲಕ್ಷದವರೆಗೆ ಶೇ.6.5 ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಯವರೆಗೆ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ 2,67,280 ರೂ. ರಿಯಾಯಿತಿಯನ್ನು ನೀಡಲಾಗುವುದು.

ಕಡಿಮೆ ಆದಾಯ ವರ್ಗದವರಿಗೆ ವಾರ್ಷಿಕ ಆದಾಯ 3.01 ಲಕ್ಷ ದಿಂದ 6 ಲಕ್ಷದವರೆಗೆ ಕಟ್ಟಡ ವಿಸ್ತೀರ್ಣ 60 ಚದರ ಮೀಟರ್ ವರೆಗೆ ಮನೆ ನಿರ್ಮಿಸಲು 6 ಲಕ್ಷದವರೆಗೆ ಶೇ.6.5 ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಯವರೆಗೆ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ 2,67,280 ರೂ. ರಿಯಾಯಿತಿ ನೀಡಲಾಗುವುದು.

ಮಧ್ಯಮ ಆದಾಯ-I ವರ್ಗದವರಿಗೆ ವಾರ್ಷಿಕ ಆದಾಯ 6.01 ಲಕ್ಷದಿಂದ 12 ಲಕ್ಷದ ವರೆಗೆ ಕಟ್ಟಡ ವಿಸ್ತೀರ್ಣ 160 ಚ.ಮೀ. ವರೆಗೆ ಮನೆ ನಿರ್ಮಿಸಲು 9 ಲಕ್ಷದವರೆಗೆ ಶೆ.4 ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಯವರಿಗೆ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ 2,35,068 ರೂ. ರಿಯಾಯಿತಿ ನೀಡಲಾಗುವುದು.

ಮಧ್ಯಮ ಆದಾಯ-II  ವರ್ಗದವರಿಗೆ ವಾರ್ಷಿಕ ಆದಾಯ 12.01 ಲಕ್ಷದಿಂದ 18 ಲಕ್ಷದ ವರೆಗೆ ಕಟ್ಟಡ ವಿಸ್ತಿರ್ಣ 200 ಚ.ಮೀ. ವರೆಗೆ ಮನೆ ನಿರ್ಮಿಸಲು 12 ಲಕ್ಷದವರೆಗೆ ಶೇ. 3 ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಸಾಲ ನೀಡಲಾಗುವುದು. ಬಡ್ಡಿ ದರದಲ್ಲಿ 2,30,156 ರೂ. ರಿಯಾಯಿತಿ ನೀಡಲಾಗುವುದು.

ಈ ಮೇಲಿನ ಸೌಲಭ್ಯವನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಕಟ್ಟಡದ ನೀಲಿ ನಕ್ಷೆ, ಆರ್.ಟಿ.ಸಿ ಪತ್ರ/ ಖಾತಾ, ಕಟ್ಟಡ ಪರವಾನಿಗೆ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ (ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಮಾಡಿರಬೇಕು), ಭಾವಚಿತ್ರ 2 ಸೆಟ್‍ನೊಂದಿಗೆ ಕಾರ್ಕಳ ಪುರಸಭೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕಾರ್ಕಳ ಪುರಸಭೆ ಮುಖ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.