ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಪ್ರತಿಮೆಯನ್ನು ಮರು ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ರೂ.5 ಲಕ್ಷ ಠೇವಣಿ ಇರಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಉಡುಪಿ ತಾಲ್ಲೂಕಿನ ವರಂಗ ಗ್ರಾಮದ ಉದಯ ಶೆಟ್ಟಿ ಮುನಿಯಾಲು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹಿಂದು ನಂಬಿಕೆಯ ಪ್ರಕಾರ ಪರಶುರಾಮನನ್ನು ತುಳುನಾಡು ಹಾಗೂ ಕರಾವಳಿ ಪ್ರದೇಶದ ಸೃಷ್ಟಿಕರ್ತ ಎನ್ನಲಾಗಿದ್ದು, ಭಗವಾನ್ ಪರಶುರಾಮನ ಬಗ್ಗೆ ಕರಾವಳಿ ಕರ್ನಾಟಕದ ಲಕ್ಷಾಂತರ ಹಿಂದುಗಳಿಗೆ ಅಪಾರ ಭಕ್ತಿ ಇದೆ. ಪ್ರತಿಮೆ ನಿರ್ಮಾಣ ಆಗದಿದ್ದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲಿದೆ. ಆದ್ದರಿಂದ, ಪರಶುರಾಮ ಪ್ರತಿಮೆಯನ್ನು ಮರುನಿರ್ಮಿಸಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಹೇಳುತ್ತಿರುವ ನಿಮ್ಮ ಅರ್ಜಿದಾರರು ಪ್ರತಿಮೆ ನಿರ್ಮಾಣಕ್ಕೆ ವೈಯಕ್ತಿಕವಾಗಿ ಎಷ್ಟು ಕಾಣಿಕೆ ನೀಡಿದ್ದಾರೆ’ ಎಂದು ಪ್ರಶ್ನಿಸಿತಲ್ಲದೆ, ‘ಅರ್ಜಿದಾರರು ರೂ.5 ಲಕ್ಷ ಠೇವಣಿ ಇರಿಸಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿತು.












