ವರದಿ : ಚರಣ್ ಸಂಪತ್ ಕಾರ್ಕಳ
ಕಾರ್ಕಳ : ರಾತ್ರಿ ವೇಳೆ ಭೂತ, ಪ್ರೇತಗಳ ಸಂಚಾರ ಇರುತ್ತದೆ ಎನ್ನುವ ಕತೆಗಳನ್ನು ನಾವೆಲ್ಲ ಜನಗಳ ಬಾಯಲ್ಲಿ ಕೇಳುತ್ತಲೇ ಇರುತ್ತೇವೆ. ಅದ್ರೆ ಕಾರ್ಕಳದಲ್ಲಿ ಹಗಲಿನಲ್ಲಿಯೂ ಪ್ರೇತಗಳು ಓಡಾಡುತ್ತೆ ಅಂದ್ರೆ ನೀವು ನಂಬುವಂತದ್ದೇ..?
ಎಸ್, ನೋಡಿ ಎರಡು ಪ್ರೇತಗಳು ಮಟಮಟ ಮಧ್ಯಾಹ್ನದ ವೇಳೆ ದಾರಿ ರಸ್ತೆ ಉದ್ದಕ್ಕೂ ಸಂಚಾರ ನಡೆಸುತ್ತಾ, ಚೀರಾಡುತ್ತಿವೆ ಎಂದರೆ ಆಶ್ಚರ್ಯ ಹಾಗೂ ಎದೆ ಜಲ್ಲ್ ಅನ್ನದೇ ಇರುತ್ತಾ..!
ಪ್ರೇತಗಳು ನಿರ್ಭೀತಿಯಾಗಿ ಸಂಚರಿಸಿದ್ದು ಬೇರೆಲ್ಲೂ ಅಲ್ಲ, ಕಾರ್ಕಳ ಪುರಸಭೆ ವ್ಯಾಪ್ತಿಯ ಮೂರು ಮಾರ್ಗದ ಬಳಿ.
ಸೋಮವಾರ ಯಾರೋ ದಾರಿಹೋಕರು” ಅಲ್ಲಿ ಪ್ರೇತ ಇದೆ, ನಾನು ಈವಾಗಷ್ಟೇ ಕಂಡೆ, ಇನ್ನು ಕೆಲವೇ ಹೊತ್ತಿನಲ್ಲಿ ನಿಮ್ಮ ಅಂಗಡಿ ಕಡೆ ಬರುತ್ತೆ” ಅಂತ ಹೇಳಿಕೊಂಡು ಸಾಗುತ್ತಿದ್ದದ್ದನ್ನು ಕೇಳಿ ಹೌಹಾರಿದ ಅಂಗಡಿ ಮಾಲಿಕರು, ಸಾರ್ವಜನಿಕರು ಧೈರ್ಯ ಮಾಡಿ, ಇದ್ಯಾವ ಪ್ರೇತ ಅಂತ ಆ ಪ್ರೇತಗಳನ್ನು ನೋಡಲೇಬೇಕು ಎಂದು ಹೋಗಿ ನೋಡಿದಾಗ ಅಲ್ಲಿ ಕಂಡಿದ್ದೇ ಬೇರೆ.
ಅಲ್ಲಿದ್ದದ್ದು ನವರಾತ್ರಿಯ ಪ್ರೇತ ವೇಷದಾರಿಗಳು. ನವರಾತ್ರಿ ಆರಂಭವಾಗಿದ್ದರಿಂದ ನಾನಾ ವೇಷದಾರಿಗಳು ತರಹೇವಾರಿ ವೇಷ ಧರಿಸಿ ರಸ್ತೆ ಉದ್ದಕ್ಕೂ ತಿರುಗುತ್ತಿದ್ದರು. ಇದನ್ನು ಕಂಡು ಸಾರ್ವಜನಿಕರು ಪೆಚ್ಚಾದರು.
ಈ ಸಲ ಕಾರ್ಕಳದಲ್ಲಿ ಪ್ರೇತದ ವಿಭಿನ್ನ ವೇಷ ಧರಿಸಿ ವೇಷದಾರಿಗಳು ರಸ್ತೆಯಲ್ಲಿ ತಿರುಗಾಡುತ್ತಿದ್ದು, ಮುಸ್ಸಂಜೆ ಹೊತ್ತು ಈ ವೇಷಗಳನ್ನು ನೋಡಿದ ಕೆಲವರು ಕಂಗಾಲಾಗಿದ್ದಾರೆ. ಕೊನೆಗೆ ಇದು ನವರಾತ್ರಿ ವೇಷ ಅಂತ ತಿಳಿದ ಮೇಲಷ್ಟೇ ಸಾರ್ವಜನಿಕರು ನಿರಾಳರಾಗಿದ್ದಾರೆ.