ಕಾರ್ಕಳ: ಶಾಲಾ ಪ್ರವಾಸ ನಿಮಿತ್ತ ಕೊಪ್ಪಳ ಜಿಲ್ಲೆಯಿಂದ ಕಾರ್ಕಳ ಗೋಮಟೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಕಸ ಎಸೆದ ವಿದ್ಯಾರ್ಥಿಗಳಿಗೆ ಭಾರಿ ದಂಡ ವಿಧಿಸಿದ ಘಟನೆ ನಡೆದಿದೆ. ಪ್ರವಾಸಕ್ಕಾಗಿ ಅನ್ಯ ಜಿಲ್ಲೆಯಿಂದ ಬಂದ ವಿದ್ಯಾರ್ಥಿಗಳು ರಸ್ತೆಯಲ್ಲಿ ಕಸ ಬಿಸಾಡಿರುವ ಕುರಿತು ಸ್ಥಳೀಯರೋರ್ವರು ಕಾರ್ಕಳ ಪುರಸಭೆಗೆ ಮಾಹಿತಿ ನೀಡಿದ್ದರು.
ತಕ್ಷಣವೇ ಎಚ್ಚೆತ್ತ ಪುರಸಭೆ, ಸಂಬಂಧಪಟ್ಟ ಶಾಲೆಗೆ ದಂಡ ವಿಧಿಸಿದೆ. ಈ ಮೂಲಕ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಮೂರು ಬಸ್ಗಳಲ್ಲಿ ಕೊಪ್ಪಳ ಜಿಲ್ಲೆಯಿಂದ ಶೈಕ್ಷಣಿಕ ಪ್ರವಾಸ ಬಂದಿದ್ದ ವಿದ್ಯಾರ್ಥಿಗಳು ಗೋಮಟೇಶ್ವರ ಬೆಟ್ಟದ ಮೆಟ್ಟಿಲು ಮತ್ತು ರಸ್ತೆಯಲ್ಲಿ ಕಸ ಎಸೆದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಶಿಕ್ಷಣ ಸಂಸ್ಥೆಯ ಹೆಸರು ಮತ್ತು ಬಸ್ ನಂಬರ್ ಗುರುತು ಹಾಕಿಕೊಂಡು ಪುರಸಭೆಯ ಪರಿಸರ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಪಂದಿಸಿದ ಅಧಿಕಾರಿ ಸ್ಥಳಕ್ಕೆ ಆಗಮಿಸಿದ್ದಾರೆ. ಮಾತ್ರವಲ್ಲದೇ ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಆಗಮಿಸಿದ ವೇಳೆ ಶಾಲಾ ಬಸ್ ಸ್ಥಳದಿಂದ ತೆರಳಿತ್ತಾದರೂ ವಿಳಾಸ ಪಡೆದ ಪರಿಸರ ಅಧಿಕಾರಿ ಶಾಲೆಗೆ 10 ಸಾವಿರ ರೂ. ದಂಡ ವಿಧಿಸಿ ನೋಟಿಸ್ ಜಾರಿ ಮಾಡಿ ಅಂಚೆ ಮೂಲಕ ಕಳುಹಿಸಿದ್ದಾರೆ.