ಸಂವಿಧಾನಕ್ಕೆ ಪುರಸಭಾ ಮುಖ್ಯಾಧಿಕಾರಿಯಿಂದ ಅವಮಾನ ಆರೋಪ: ಮುಖ್ಯಾಧಿಕಾರಿ ರೇಖಾ ಶೆಟ್ಟಿ ವಿರುದ್ದ ಉಪನ್ಯಾಸಕಿ ದೂರು

ಕಾರ್ಕಳ : ದಲಿತ ಉಪನ್ಯಾಸಕಿಯಾಗಿಯಾದ ನನ್ನ ಮೇಲೆ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ  ದೌರ್ಜನ್ಯ ಎಸಗಿದ್ದಾರೆ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಹಾಗೂ ದಲಿತರಿಗೆ ಸಿಗುವ ಸವಲತ್ತುಗಳನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಕಳದ ಉಪನ್ಯಾಸಕಿ ಸವಿತಾ ಕುಮಾರಿ ತಮಗಾದ ನೋವನ್ನು ಆಡಿಯೋ ಮೂಲಕ ತೋಡಿಕೊಂಡಿದ್ದು ಆಡಿಯೋ ಭಾರೀ ವೈರಲ್ ಆಗಿದೆ. ಇದೀಗ ಉಪನ್ಯಾಸಕಿ ಬಿ.ಅರ್ ಅಂಬೇಡ್ಕರ್ ಸೇವಾ ಸಮಾಜ ಸಂಘಕ್ಕೆ ಲಿಖಿತ ದೂರನ್ನೂ ನೀಡಿದ್ದಾರೆ.

ಏನು ವಿಷಯ?

ಕಳೆದ‌ ಸಲ ಪ್ರಾಕೃತಿಕ ವಿಕೋಪದಿಂದಾಗಿ ಉಪನ್ಯಾಸಕಿ ಸವಿತಾ ಅವರ  ಮನೆಗೆ ಹಾನಿಯಾಗಿದ್ದು ಮನೆ ದುರಸ್ತಿಗಾಗಿ ಸಹಾಯಧನ ಹಾಗೂ ನೆರವು ನೀಡುವಂತೆ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿ ವರ್ಷ ಕಳೆದರೂ ಪುರಸಭೆಯಿಂದ ಅರ್ಜಿಗೆ ಸ್ಪಂದನೆಯೇ ದೊರೆಯಲಿಲ್ಲ.ಸೂಕ್ತ ಸ್ಪಂದನೆಗಾಗಿ ಸವಿತಾ ಕುಮಾರಿ ಪುರಸಭೆ ಮುಖ್ಯಾಧಿಕಾರಿ ರೇಖಾ‌ ಜೆ ಶೆಟ್ಟಿ ಅವರನ್ನು ಭೇಟಿ ಯಾಗಿ ಸಹಾಯಧನ ನೀಡುವ ಬಗ್ಗೆ ವಿಚಾರಿಸಿದಾಗ, ಮುಖ್ಯಾಧಿಕಾರಿ ರೇಖಾ ಶೆಟ್ಟಿ, ನಿಮಗೆ ಸಹಾಯಧನ ನೀಡಲು ಸಾಧ್ಯವಿಲ್ಲ ನಿಮ್ಮ ಮನೆಯ ತೆರಿಗೆ ಬಾಕಿ‌ ಇದೆ, 10 ಸಾವಿರ ದಂಡ ಪಾವತಿಸಿ ಎಂದಿದ್ದಾರೆ. ಈ ವೇಳೆ  ರೂ 10 ಸಾವಿರ ರೂ ಕಟ್ಟಲು ಅಸಾಧ್ಯ ಎಂದಾಗ, ಮುಖ್ಯಾಧಿಕಾರಿ ಅವರು ರೇಗಿ ಕಟ್ಟುವುದಾದರೆ ಕಟ್ಟಿ ಇಲ್ಲವಾದರೆ ಹೆಚ್ಚುವರಿ ತೆರಿಗೆ ಹಾಕಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಂದು ಅಧಿಕಾರದ ದರ್ಪ ತೋರಿಸಿದ್ದಾರೆ. ಅಲ್ಲದೇ  ದಲಿತರಿಗೆ ಕೊಡುವ ಸವಲತ್ತು ಹೆಚ್ಚಾಗಿದ್ದು  ಇನ್ನು ಪುರಸಭೆಯಿಂದ ನಿಮಗೆ ಯಾವುದೇ ಸವಲತ್ತುಗಳನ್ನು ನೀಡವುದಿಲ್ಲ. ಗೇಟ್ ಓಟ್ ಎಂದು ನಿಂದಿಸಿದ್ದಾರೆ ಎಂದು ಸವಿತಾ ಕುಮಾರಿ ‌ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಮಾನಸಿಕವಾಗಿ ನೊಂದಿದ್ದೇನೆ: ಸವಿತಾ ಕುಮಾರಿ

ನಾನು ಕಳೆದ ಹತ್ತು ವರ್ಷಗಳಿಂದ ರಾಜ್ಯಶಾಸ್ತ್ರ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಸಂವಿಧಾನದ ಘನತೆ, ಗೌರವ ರಚನೆ ಕುರಿತು ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇನೆ.

ನಮ್ಮ ಹಕ್ಕು ಏನು? ನಮ್ಮ ಹಕ್ಕುಗಳು ಉಲ್ಲಂಘನೆಯಾದ ಅದನ್ನು ಹೇಗೆ ಪಡೆದು ಕೊಳ್ಳಬೇಕು ಎಂದು ತಿಳಿಸುವ ನಮಗೆ ಇಂದು ನನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ನಾನು ವಿಫಲವಾಗಿದ್ದೇನೆ. ದಲಿತರಿಗೆ ಸಮಾಜದ ಅವಮಾನವಾಗುವುದು ಸಹಜ.ಅದರೆ ಇವತ್ತು ಸರ್ಕಾರದ ನೆಲೆಯಿಂದ ನಮಗೆ ಪೂರ್ಣ ಅವಮಾನವಾಗಿದೆ. ದಲಿತ ಉಪನ್ಯಾಸಕಿಯಾಗಿ ಯಾದ ನನ್ನ ಮೇಲೆ ಈ‌‌ ರೀತಿ ದೌರ್ಜನ್ಯ ಎಸಗಿರುವುದು ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿರುವುದು ಅಸಂವಿಧಾನಿಕವಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿ ಕೂಡಲೇ ಕ್ಷಮೆ ಕೇಳಬೇಕು.‌ ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸುತ್ತೇನೆ. ಕೂಡಲೇ ಮುಖ್ಯಾಧಿಕಾರಿಯವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಡಾ.ಬಿಅರ್ ಅಂಬೇಡ್ಕರ್ ಸೇವಾ ಸಮಾಜ ಸಂಘಕ್ಕೆ ಸವಿತಾ ಕುಮಾರಿ ದೂರು ನೀಡಿದ್ದಾರೆ.