ಕಾರ್ಕಳ ಎಂಪಿಎಂ ಕಾಲೇಜಿನಲ್ಲಿ ‌ಪರಿಸರ ಮತ್ತು ಕೃಷಿ ಜಾಗೃತಿ ಅಭಿಯಾನ

ಕಾರ್ಕಳ: ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮದರ್ಜೆ  ಕಾಲೇಜು ಕಾರ್ಕಳ ಇಲ್ಲಿ ಶೃಂಗೇರಿಯ ಬೀಸ್ ಪರಿಸರ ಸಂಸ್ಥೆಯ ವತಿಯಿಂದ “ಹವಾಮಾನ ಬದಲಾವಣೆ ಮತ್ತು ಯುವಜನತೆ -ಕುವೆಂಪು ನೆಲದಿಂದ ತೇಜಸ್ವಿ ನೆಲದವರೆಗೆ” ಎನ್ನುವ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ಕೃಷಿ ಜಾಗೃತಿ ಅಭಿಯಾನ ಕಾರ್ಯಕ್ರಮ‌ ಕಾಲೇಜಿನ ಸಭಾಂಗಣದಲ್ಲಿ ಜು.5 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಬೀಸ್ ಸಂಸ್ಥೆಯ ಸಂಚಾಲಕರಾದ ನಾಗರಾಜ್ ಕೂವೆ ಅವರು ಮಾತನಾಡಿ, ಹವಾಮಾನ ಬದಲಾವಣೆ ಎನ್ನುವುದು ಇವತ್ತಿನ ವಾಸ್ತವವಾಗಿದೆ.ಇಂದು ಏರುತ್ತಿರುವ ಭೂಮಿಯ ಬಿಸಿಯ ನಡುವೆ ಮನುಷ್ಯನ ಜೀವನೋಪಾಯ ಅಪಾಯದಲ್ಲಿದೆ. ಹವಾಮಾನ ಬದಲಾವಣೆ ಬಗ್ಗೆ ಅರಿವು ಹೆಚ್ಚಿಸಿಕೊಳ್ಳುವ  ಅದನ್ನು ಸಾಮಾಜಿಕ ನೆಲೆಯಲ್ಲಿ ಸಾಧ್ಯವಾದಷ್ಟು ತಡೆಯುವ ವಿಧಾನಗಳನ್ನು ಅರಿಯುವ ಅಗತ್ಯವಿದೆ ಅದಕ್ಕಾಗಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಶುರು ಮಾಡಿದ್ದೇವೆ ಎಂದರು.

ಹವಾಮಾನ ಬದಲಾವಣೆ ಮತ್ತು ಯುವಜನತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪರಿಸರವನ್ನು ಸಂರಕ್ಷಿಸಲು ವಿದ್ಯಾರ್ಥಿಗಳು ಮಾಡಲೇಬೇಕಾದ ಸಂಗತಿಗಳ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯನ್ನು ಹೆಚ್ಚಿಸಲು ಕರ್ನಾಟಕದ ಜೀವವೈವಿದ್ಯದ ಮಹತ್ವವನ್ನು ಸಾರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ‌ ಪ್ರಾಂಶುಪಾಲರಾದ ಡಾ.ಕಿರಣ್ ಎಂ ಅವರು ವಹಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ, ಸೌಮ್ಯ ಎಚ್ ಕೆ, ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ  ಸುಷ್ಮಾ ರಾವ್, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಪ್ರಸಾದ್ ಶೆಣೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸುಚಿತ್ರಾ ನಿರೂಪಿಸಿ, ವಂದಿಸಿದರು.