ಕಾರ್ಕಳ: ಮಾಳದಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಮರ ಕಪ್ಪೆ ಪತ್ತೆ

ಚಿತ್ರ: ಮನು ಬಿ.ನಕ್ಕತ್ತಾಯ
ಉಡುಪಿ: ಅಳಿವಿನಂಚಿನಲ್ಲಿರುವ ‘ಮಲಬಾರ್ ಟ್ರೀ ಟೋಡ್’ (ಮಲಬಾರ್ ಮರ ಕಪ್ಪೆ) ಪ್ರಬೇಧವು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಮಾಳ ಅರಣ್ಯ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ತಿಳಿದುಬಂದಿದೆ.
2003-04ರ ವರೆಗೆ ಅತ್ಯಂತ ಅಪರೂಪ ಎನಿಸಿದ್ದ ‘ಮಲಬಾರ್ ಟ್ರೀ ಟೋಡ್’ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. 2014ರಿಂದ ಮ್ಯಾಪಿಂಗ್ ಮಲಬಾರ್ ಟ್ರೀ ಟೋಡ್ ಎಂಬ ಅಭಿಯಾನವನ್ನು ಇಂಡಿಯಾ ಬಯೋಡೈವರ್ಸಿಟಿ ಪೋರ್ಟಲ್ ಮೂಲಕ ಆರಂಭಿಸಿದ್ದರು. ಈ ಕಪ್ಪೆ ಅಳಿವಿನಂಚಿನಲ್ಲಿರುವ ಪ್ರಬೇದವೇ ಮತ್ತು ಈ ಕಪ್ಪೆ ಭಾರತದ ಪಶ್ಚಿಮ ಘಟ್ಟಗಳ ಯಾವ ಯಾವ ಕಡೆಗಳಲ್ಲಿ ಕಾಣ ಸಿಗುತ್ತದೆ ಎಂಬುದರ ಬಗ್ಗೆ ಅಧ್ಯಯನ ನಡೆಸುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗಿತ್ತು.
ಈ ಅಭಿಯಾನದ ಮೂಲಕ 2019ರವರೆಗೆ ಪಡೆದ ಅಂಕಿ ಅಂಶಗಳ ಪ್ರಕಾರ ಕರ್ನಾಟಕ ರಾಜ್ಯ ಸೇರಿದಂತೆ ಪಶ್ಚಿಮ ಘಟ್ಟಗಳ ಸುಮಾರು 45 ಪ್ರದೇಶಗಳಲ್ಲಿ ಈ ಕಪ್ಪೆ ಪತ್ತೆಯಾಗಿದೆ. ಇದರಲ್ಲಿ ಮಾಳದ ಮಣ್ಣಪಾಪು ಮನೆ ಪ್ರದೇಶ ಕೂಡ ಒಂದಾಗಿದೆ.
ಮಣ್ಣಪಾಪು ಮನೆ ವತಿಯಿಂದ ಈ ಪರಿಸರದ ಸುಮಾರು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಡಾ.ಗುರುರಾಜ ಕೆ.ವಿ. ನೇತೃತ್ವದಲ್ಲಿ ಒಟ್ಟು ಎಂಟು ಮಂದಿ ದಿ ಫ್ರಾಕ್ ವಾಕ್ ಎಂಬ ಕಪ್ಪೆಗಳ ಅಧ್ಯಯನ ನಡೆಸಿದ್ದು, ಈ ವೇಳೆ ಈ ‘ಮಲ ಬಾರ್ ಟ್ರೀ ಟೋಡ್’ ಕಪ್ಪೆ ಸೇರಿದಂತೆ ಒಟ್ಟು 14 ಪ್ರಬೇಧಗಳ ಕಪ್ಪೆಗಳು ಪತ್ತೆಯಾಗಿವೆ.
ಮರದಲ್ಲಿ ವಾಸ ಮಾಡುವ ಅತ್ಯಂತ ವಿಶಿಷ್ಟ ಜೀವನ ಶೈಲಿ ಮತ್ತು ಈವರೆಗೆ ಕೇವಲ ಮೂರು ವಾರಗಳ ಕಾಲ ಮಾತ್ರ ಕಾಣಸಿಕ್ಕಿರುವ ಈ ಪ್ರಬೇಧದ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯಬೇಕಾಗಿವೆ. 2005ರಲ್ಲಿ ವಿಜ್ಞಾನಿ ಡಾ.ಗುರುರಾಜ ಕೆ.ವಿ. ಈ ಕಪ್ಪೆಗಳ ಕೂಗು ಮತ್ತು 2007ರಲ್ಲಿ ಪುಣೆಯ ವಿಜ್ಞಾನಿ ಡಾ. ದಿನೇಶ್ ನೇತೃತ್ವದ ತಂಡ ಮೊಟ್ಟೆಯ ಬಗ್ಗೆ ಅಧ್ಯಯನ ನಡೆಸಿತ್ತು.
ಚಿತ್ರ: ಮನು ಬಿ.ನಕ್ಕತ್ತಾಯ
‘ಮಲಬಾರ್ ಟ್ರೀ ಟೋಡ್’ ಪ್ರಬೇಧದ ಗಂಡು ಕಪ್ಪೆಗಳು ಹೆಣ್ಣು ಕಪ್ಪೆ ಯನ್ನು ಆಕರ್ಷಿಸಿ ಕೂಡುವುದಕ್ಕಾಗಿ ಒಟ್ಟಿಗೆ ಸೇರಿ ಕೂಗುತ್ತದೆ. ಇದನ್ನು ಕೋರಸ್ ಕಾಲ್(ಸಮೂಹ ಕೂಗು) ಎಂದು ಕರೆಯಲಾಗುತ್ತದೆ. ಒಂದು ಗಂಡು ಕಪ್ಪೆ ಕೂಗಲು ಪ್ರಾರಂಭಿಸಿದರೆ ಸುತ್ತಮುತ್ತಲು ಇರುವ ಸುಮಾರು ಐದಾರು ಗಂಡು ಕಪ್ಪೆಗಳು ಕೂಡ ಸಮೂಹ ವಾಗಿ ಕೂಗಲು ಪ್ರಾರಂಭಿಸುತ್ತದೆ. ಇದರಲ್ಲಿ ಗಟ್ಟಿಯಾಗಿ ಕೂಗುವ ಮತ್ತು ಬಲಿಷ್ಠವಾಗಿರುವ ಕಪ್ಪೆಯೊಂದಿಗೆ ಹೆಣ್ಣು ಕಪ್ಪೆ ಕೂಡಿಕೊಳ್ಳುತ್ತದೆ. ಅನಂತರ ಹೆಣ್ಣು ಕಪ್ಪೆ ಮರದಿಂದ ಕೆಳಗೆ ಇಳಿದು ನೀರಿನಲ್ಲಿ ಮೊಟ್ಟೆ ಇಡುತ್ತವೆ. ಕೆಲವು ಬಾರಿ ಮರದ ಪೊಟರೆಯೊಳಗೆ ನಿಂತ ನೀರಲ್ಲೂ ಈ ಕಪ್ಪೆ ಮೊಟ್ಟೆ ಇಡುತ್ತದೆ. ಈ ಕಪ್ಪೆ ಮಳೆಗಾಲದ ಆರಂಭದಲ್ಲೇ ಕೂಡಿಕೊಂಡು ಮೊಟ್ಟೆಗಳನ್ನು ಇಡುತ್ತದೆ. ಮಳೆಗಾಲದ ಮೂರು ವಾರ ಅಂದರೆ ಜೂನ್ ಅಂತ್ಯದಲ್ಲಿ ಈ ಕಪ್ಪೆ ಕಾಣಲು ಸಿಗಲ್ಲ. ಮೊಟ್ಟೆ ಇಟ್ಟ ಬಳಿಕ ನಾಪತ್ತೆಯಾಗುವ ಈ ಕಪ್ಪೆ, ಆ ನಂತರ ಯಾರ ಕಣ್ಣಿಗೂ ಈವರೆಗೆ ಕಾಣಿಸಿಲ್ಲ. ಮೊಟ್ಟೆ ಇಟ್ಟ ಬಳಿಕ ಈ ಕಪ್ಪೆ ಮತ್ತೆ ವಾಪಾಸ್ಸು ಮರದ ಮೇಲೆ ಹೋಗುತ್ತದೆಯೇ ಅಥವಾ ಬೇರೆ ಎಲ್ಲಿಯಾದರೂ ಬಚ್ಚಿಟ್ಟುಕೊಳ್ಳು ತ್ತದೆಯೇ ಎಂಬುದು ಈವರೆಗೆ ತಿಳಿದುಬಂದಿಲ್ಲ. ಆ ಕುರಿತು ಅಧ್ಯಯನ ನಡೆಯಬೇಕಾಗಿದೆ ಎನ್ನುತ್ತಾರೆ ಡಾ.ಗುರುರಾಜ ಕೆ.ವಿ.
ಈ ಕಪ್ಪೆ ಕಂದು ಬಣ್ಣವನ್ನು ಹೊಂದಿದ್ದು, ಕಣ್ಣು ಬಂಗಾರದಂತೆ ಹೊಳೆಯುತ್ತದೆ. ಕೈಯಲ್ಲಿರುವ ಬೆರಳ ತುದಿಯಲ್ಲಿ ಮರ ಹತ್ತಲು ಸಹಾಯವಾಗುವ ಚಪ್ಪಟೆ ಆಕಾರದಲ್ಲಿ ಡಿಸ್ಕ್‌ಗಳಿರುತ್ತದೆ. ಸಾಮಾನ್ಯವಾಗಿರುವ ಕಪ್ಪೆಗಳ ಬೆರಳಲ್ಲಿ ಈ ರೀತಿ ಇರುವುದಿಲ್ಲ. ಈ ಕಪ್ಪೆ ಮಿಡತೆ ರೀತಿಯಲ್ಲಿ ಕೂಗುತ್ತ ಶಬ್ದ ಮಾಡುತ್ತದೆ. ಈ ಪ್ರಬೇಧದದಲ್ಲಿ ಗಂಡು ಕಪ್ಪೆ ಮಾತ್ರ ಕೂಗುತ್ತದೆ. ಆಕಾರದಲ್ಲಿ ಹೆಣ್ಣು ಗಂಡಿಗಿಂತ ದೊಡ್ಡದಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.