ಮಲೆಕುಡಿಯ ಸಂಘದ ಆಶ್ರಯದಲ್ಲಿ‌ ವಿವಿಧ  ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಕ್ರಮ

ಕಾರ್ಕಳ: ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಆಶ್ರಯದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳಿಂದ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮವು ನ. 3ರಂದು ಸಂಘದ ಕೇಂದ್ರ ಕಚೇರಿ ಮಾಳ ಪೇರಡ್ಕದಲ್ಲಿ ಜರಗಿತು.
ಮಾಳ – ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಗೋವಿಂದ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರದ ವಿವಿಧ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಮಲೆಕುಡಿಯ ಸಂಘವು ಹಲವಾರು  ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಸಂಘದ ಜಿಲ್ಲಾಧ್ಯಕ್ಷ ಮಂಜಪ್ಪ ಗೌಡ ನೂರಾಳ್ ಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಜಂಟಿ ಕೃಷಿ ನಿರ್ದೇಶಕರ ಕಛೇರಿಯ ತಾಂತ್ರಿಕ ಸಹಾಯಕ ಎಚ್ ಅನಂತ ಪ್ರಭು ಅವರು, ಸಮಗ್ರ ಕೃಷಿ ಪದ್ಧತಿಯ ತರಬೇತಿ ನೀಡಿದರು.
ರೇಷ್ಮೆ ಇಲಾಖೆಯ ರೇಷ್ಮೆ ಸಹಾಯಕ ನಿರ್ದೇಶಕ ಹನಮಪ್ಪ ಸಿದ್ದಪ್ಪ ಕೋರಿ, ಅಜೆಕಾರು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕಾ ಅಧಿಕಾರಿ ಚಿದಾನಂದ ಕಳಕಪುರ, ಅಜೆಕಾರು ಆತ್ಮ ಯೋಜನೆಯ ತಾಂತ್ರಿಕ ವ್ಯವಸ್ಥಾಪಕಿ ಉಮಾ ಇವರು ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಸುಮಾರು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸದುಪಯೋಗ ಪಡೆದುಕೊಂಡರು.
ಸುಜಾತ ಕಬ್ಬಿನಾಲೆ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಗೋಪಾಲ ಗೌಡ ಎತ್ತಲ್ ಗುಡ್ಡೆ ಸ್ವಾಗತಿಸಿ,‌ ಪ್ರಧಾನ ಕಾರ್ಯದರ್ಶಿ ಸಾಧು ಗೌಡ ನಾರ್ಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಕೆರ್ವಾಶೆ ವಂದಿಸಿದರು.