ಕಾರ್ಕಳ: ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿವಿಧ ಸ್ಪರ್ಧೆ

ಕಾರ್ಕಳ : ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ವ್ಯಾಪ್ತಿಯಲ್ಲಿ ಬರುವ ಕಾರ್ಕಳ ಶಾಖಾ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ -2019 ರ ಅಂಗವಾಗಿ ಬುಧವಾರ ಶಾಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮಟ್ಟದಿಂದ ಹಿಡಿದು ಕಾಲೇಜು ಮಟ್ಟದವರೆಗೂ ಭಾವ ಗೀತೆ ಸ್ಪರ್ದೆ, ಜಾನಪದ ಸ್ಪರ್ದೆ ಹಾಗೂ ಅಭಿನಯ ಗೀತೆ ಸ್ಪರ್ದೆ ಮತ್ತು ಇನ್ನಿತರ ಸ್ಪರ್ಧೆಗಳನ್ನು ನಡೆಸಲಾಯಿತು.

ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಶುಭದ ರಾವ್, ಓದುವ ಹವ್ಯಾಸದಿಂದ ಜ್ಞಾನದ ಸಂಪತ್ತು ಹೆಚ್ಚುತ್ತಲೇ ಹೋಗುತ್ತದೆ. ಓದುವ ಸಂಸ್ಕøತಿಯಿಂದ ಜಗತ್ತಿನ ಹಲವಾರು ವಿಷಯಗಳನ್ನು ತಿಳಿದುಕೊಳ್ಳುವುದರ ಜೊತೆಗೆ ವಿವಿಧ ಕಾಲ ಘಟ್ಟಗಳ ಹಾಗೂ ವಿವಿಧ ದೇಶಗಳ ಸಾಮಾಜಿಕ ಆರ್ಥಿಕ, ರಾಜಕೀಯ ಹಾಗೂ ತಂತ್ರಜ್ಞಾನದ ಮಜಲುಗಳನ್ನು ಅರ್ಥಮಾಡಿಕೊಳ್ಳಬಹುದು. ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಕಳ ಪುರಸಭಾ ಪರಿಸರ ಇಂಜಿನಿಯರ್ ಮದನ್, ಗ್ರಂಥಾಲಯಗಳಲ್ಲಿ ಸ್ವಚ್ಚತೆ ಕಾಪಾಡುವಿಕೆ ಹಾಗೂ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿ,   ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಸುವುದರಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ತಮ್ಮ ತಮ್ಮ ಮನೆಗಳಲ್ಲಿಯೇ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸುವಂತೆ ಕರೆ ನೀಡಿದರು.

ಶಾಖಾ ಗ್ರಂಥಾಲಯಕ್ಕೆ 10 ವರ್ಷಗಳಿಂದ ನಿರಂತರವಾಗಿ ಪುಸ್ತಕಗಳು, ರ್ಯಾಕ್, ನೀರಿನ ಪಿಲ್ಟರ್ ಹಾಗೂ ಇತ್ಯಾದಿ ಸಾಮಾಗ್ರಿಗಳನ್ನು ದಾನವಾಗಿ ನೀಡಿರುವ ವಿಶ್ವಾಸ ಟ್ರೇಡರ್ಸ್‍ನ ಮಾಲಕರು ಹಾಗೂ ಉದ್ಯಮಿಯಾದ ಶ್ರೀನಿವಾಸ ಪೈ ಮತ್ತು ನಿರ್ಮಲ ಎಸ್ ಪೈ. ಇವರನ್ನು ಹಾಗೂ ಶುಭದ ರಾವ್ ಇವರಿಗೆ ಉತ್ತಮ ಓದುಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಕಳ ಪುರಸಭಾ ಸದಸ್ಯೆ ಪೂರ್ಣಿಮಾ ಉಪಸ್ಥಿತರಿದ್ದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ  ಪ್ರಾಸ್ತಾವಿಕವಾಗಿ ಮಾತನಾಡಿ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ ಹಾಗೂ ಸಾರ್ವಜನಿಕರು ಗ್ರಂಥಾಲಯಕ್ಕೆ ಭೇಟಿ ನೀಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಡಿಜಿಟಲ್ ಗ್ರಂಥಾಲಯದ ಸೇವೆಯನ್ನು ಕಾರ್ಕಳ ಶಾಖಾ ಗ್ರಂಥಾಲಯದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು ಹಾಗೂ ಸ್ವಾಗತಿಸಿದರು. ದ್ವಿತೀಯ ದರ್ಜೆ ಸಹಾಯಕಿ ಶಕುಂತಳ ಕುಂದರ್ ವಂದಿಸಿದರು. ಕಾರ್ಕಳ ಶಾಖಾ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ವನಿತಾ ಕಾರ್ಯಕ್ರಮ ನಿರೂಪಿಸಿದರು.