ಉಡುಪಿ: ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ಶ್ರೀನಿವಾಸ ಸೇವಾ ಟ್ರಸ್ಟ್ ಮತ್ತು ಸುಮೇಧಾ ಫ್ಯಾಷನ್ ಇನ್‌ಸ್ಟಿಟ್ಯೂಟ್ ಆಶ್ರಯದಲ್ಲಿ ಕಾನೂನು ಮಾಹಿತಿ ಕಾರ್ಯಕ್ರಮವು ಕಾರ್ಕಳ ಎಸ್‌ಜೆ ಆರ್ಕೆಡ್‌ನಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಕಳ ಗ್ರಾಮಾಂತರ ಠಾಣೆಯ ಪ್ರೊಬೇಷನರಿ ಪಿಎಸ್‌ಐ ಸೀಮಾ ಅಂಜುಮ್ ಕಾರ್ಯಾಗಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ವಿವಿಧ ಸಂದರ್ಭಗಳಲ್ಲಿ ಎದುರಿಸಬಹುದಾದ ಲೈಂಗಿಕ ದೌರ್ಜನ್ಯ, ಅದನ್ನು ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ದೌರ್ಜನ್ಯ ನಡೆದ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಮಾಹಿತಿ ನೀಡಿದರು.
ಪೋಕ್ಸೊ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಸಂಚಾರ ನಿಯಮಗಳು ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆಯೂ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಸುಮೇಧಾ ಫ್ಯಾಷನ್ ಇನ್‌ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಜಿ. ಅಶ್ರೀತ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸೌಜನ್ಯ ಉಪಸ್ಥಿತರಿದ್ದರು. ಸಹನಾ ಪ್ರಾರ್ಥಿಸಿದರು. ಕಾವ್ಯ ಸ್ವಾಗತಿಸಿದರು. ಶ್ವೇತಾ ವಂದಿಸಿದರು. ಸಂಜನಾ ಕಾರ್ಯಕ್ರಮ ನಿರೂಪಿಸಿದರು.















