ಕಾರ್ಕಳ: ದೇಶವೇ ಕೊರೋನಾ ಲಾಕ್ ಡೌನ್ ನಿಂದ ಕಂಗಾಲಾಗಿದೆ. ಜಿಲ್ಲಾಡಳಿತ ತುರ್ತು ಸೇವೆ ಹೊರತುಪಡಿಸಿ ಬೇರ್ಯಾವುದೇ ಸಾರ್ವಜನಿಕ ಚಟುವಟಿಕೆಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಮಾಡದಂತೆ ನಿರ್ಬಂಧ ಹೇರಿದ್ದರೂ ಕಾರ್ಕಳದ ಕೋಟಿ ಚೆನ್ನಯ್ಯ ಪಾರ್ಕ್ ರಸ್ತೆಯಲ್ಲಿ ಈ ಲಾಕ್ ಡೌನ್ ಗಳನ್ನು ಗಾಳಿಗೆ ತೂರಲಾಗುತ್ತಿದೆ.
ಹೌದು ಶುಕ್ರವಾರ ಕಾರ್ಕಳ ಪೇಟೆಯ ನಾಗರಿಕರೊಬ್ಬರು ತಮ್ಮ ಮಕ್ಕಳ ಜೊತೆ ಇಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ , ಡ್ರೈವಿಂಗ್ ಕಲಿಸುವ ನೆಪದಲ್ಲಿ ತಮ್ಮ ಕಾರ್ ನಲ್ಲಿ ಪಾರ್ಕ್ ರಸ್ತೆಯಲ್ಲಿ ಸುಮಾರು 20 ಕ್ಕಿಂತಲೂ ಜಾಸ್ತಿ ರೌಂಡ್ ಗಳನ್ನು ತೆಗೆಯುವ ಮೂಲಕ ಕೊರೋನಾ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ತಾಲೂಕಿನಲ್ಲಿ ಬೆಳಗ್ಗೆ 7-11 ಗಂಟೆಯ ವರೆಗೆ ಬರೀ ಎಮರ್ಜೆನ್ಸಿ ಸೇವೆಗಳನ್ನು ಉಪಯೋಗಿಸಲು, ತುರ್ತು ಆಹಾರಗಳನ್ನು ಕೊಳ್ಳಲು ಮಾತ್ರ ಸಾರ್ವಜನಿಕರು ಹೊರಗೆ ಬರಬೇಕೆಂಬ ಸೂಚನೆಯಿದ್ದರೂ ಈ ವ್ಯಕ್ತಿಗಳು ನಮಗೆ ಯಾವ ನಿಯಮವೂ ಇಲ್ಲ, ಆಡಳಿತ ವರ್ಗದವರ ಬೆಂಬಲವಿದೆ ಎನ್ನುವ ಮನಃಸ್ಥಿತಿಯಿಂದ ಕೆಲವು ದಿನಗಳಿಂದ ಸಾರ್ವಜನಿಕ ಪ್ರದೇಶದಲ್ಲಿ ಹಿಗ್ಗಾ ಮಗ್ಗಾ ವಾಹನ ಚಾಲನೆ ಕಲಿಯಲು ಕೋಟಿ ಚೆನ್ನಯ್ಯ ಪಾರ್ಕ್ ರಸ್ತೆಗೆ ಬಂದಿದ್ದಾರೆ ಎನ್ನುವುದು ಇದನ್ನು ನೋಡಿದ ಸಾರ್ವಜನಿಕರು ಕೊಟ್ಟ ಮಾಹಿತಿ.
ದೊಡ್ಡವರಿಗೊಂದು ನಿಯಮ ಬಡವರಿಗೊಂದು ನಿಯಮವೇ?
ಇತ್ತೀಚೆಗೆ ಕಾರ್ಕಳ ಪೇಟೆ ಪ್ರದೇಶದಲ್ಲಿ ಬಡವರಿಗೆ ಒಂದು ನಿಯಮ, ಶ್ರೀಮಂತರಿಗೆ ಒಂದು ನಿಯಮ ಎನ್ನುವಂತಾಗಿದೆ. ಶ್ರೀಮಂತರಿಗೆ ಪಾಸ್, ಬಡವರಿಗೆ ಗೇಟ್ ಪಾಸ್ ಎನ್ನುವ ಹೊಸ ನಿಯಮ ಇಲ್ಲಿ ಜಾರಿ ಇದೆಯೇನೋ ಎನ್ನುವುದು ಸಾರ್ವಜನಿಕರ ಬೇಸರ. ಇಂತಹ ವ್ಯಕ್ತಿಗಳು ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡುತ್ತಿದ್ದರೂ, ಯಾರೂ ಅವರನ್ನು ತಡೆಯಲು ಸಾಧ್ಯವಾಗುತ್ತಿಲ್ಲವೇಕೆ ?ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ. ಕೆಲ ಶ್ರೀಮಂತರಿಗೆ ವಾಹನಗಳಿಗೆ “ತರಕಾರಿ ಕೊಂಡೊಯ್ಯುವ ವಾಹನ, ಆಹಾರ ಸಾಗಿಸುವ ವಾಹನ ಎನ್ನುವ ಚೀಟಿಯನ್ನು ಪುರಸಭೆ ನೀಡಿದೆ. ಆದರೆ ಈ ಚೀಟಿ ಅಂಟಿಸಿದ ಆ ವಾಹನಗಳು ಯಾವ ಸೇವೆಯನ್ನೂ ನೀಡುತ್ತಿಲ್ಲ. ಬದಲಾಗಿ ಆ ಚೀಟಿಯನ್ನು ದುರ್ಬಳಕೆ ಮಾಡಿ ರಸ್ತೆಯಲ್ಲಿ ಸುತ್ತುತ್ತಿವೆ. ಇದು ಶ್ರೀಮಂತರಿಗೆ ಪುರಸಭೆ ಕೊಟ್ಟ ಕೊಡುಗೆ ಎನ್ನುವ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
ಇದೀಗ ಕೋಟಿಚೆನ್ನಯ ಪಾರ್ಕ್ ರಸ್ತೆಯಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸ್ವರಾಜ್ಯಮೈದಾನದಿಂದ-ಕೋಟಿಚೆನ್ನಯ್ಯ ಪಾರ್ಕ್, ಮತ್ತೆ ಕೋಟಿ ಚೆನ್ನಯ್ಯ ಪಾರ್ಕ್ ನಿಂದ ಸ್ವರಾಜ್ಯ ಮೈದಾನ ರಸ್ತೆಗೆ ಸುಮಾರು ಹತ್ತಕ್ಕಿಂತಲೂ ಜಾಸ್ತಿ ರೌಂಡ್ ಹೊಡೆದ ಈ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.