ಉಡುಪಿ: ದ. ಕ ಮತ್ತು ಉಡುಪಿ ಜಿಲ್ಲೆಗಳ ಹಿರಿಯ ನೇಕಾರರಾದ ಉಡುಪಿ ನೇಕಾರ ಸಂಘದ ಸೋಮಪ್ಪ ಜಥನ್ನ(86) ಮತ್ತು ಶಿವಳ್ಳಿ ಸಂಘದ ಸಂಜೀವ ಶೆಟ್ಟಿಗಾರ್(83) ಅವರನ್ನು ಉಡುಪಿ ಸೀರೆ ನೇಕಾರಿಕೆ ಪುನಶ್ಚೇತನದ ಬಗ್ಗೆ ಕೆಲಸ ಮಾಡುತ್ತಿರುವ ಕಾರ್ಕಳದ ಕದಿಕೆ ಟ್ರಸ್ಟ್ ವತಿಯಿಂದ ಉಡುಪಿಯಲ್ಲಿರುವ ಶಿವಳ್ಳಿ ನೇಕಾರರ ಸಂಘದ ಸಭಾ ಭವನದಲ್ಲಿ ಸನ್ಮಾನಿಸಲಾಯಿತು.
ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತ ರೈ ಅವರು, ಇಂತಹ ಹೆಚ್ಚಿನ ಫಲಾಪೇಕ್ಷೆ ಇಲ್ಲದ ಹಿರಿಯ ನೇಕಾರರಿಂದಾಗಿಯೇ ಉಡುಪಿ ಸೀರೆ ನೇಕಾರಿಕೆ ಇಲ್ಲಿ ವರೆಗೂ ಉಳಿದಿತ್ತು ಎಂದರು.
ಕಳೆದ ಮೂರು ವರ್ಷಗಳಲ್ಲಿ ನಿರಂತರವಾಗಿ ಟ್ರಸ್ಟ್ ನಡೆಸಿದ ಕಾರ್ಯದಿಂದ ಎರಡು ಜಿಲ್ಲೆಗಳಲ್ಲಿ ಒಟ್ಟು 42 ಜನ ನೇಕಾರರೊಂದಿಗೆ ಅಳಿವಿನಂಚಿನಲ್ಲಿದ್ದ ಉಡುಪಿ ಸೀರೆ ನೇಕಾರಿಕೆ ಈಗ 70 ರಷ್ಟು ಆಗಿದ್ದು ಪುನಶ್ಚೇತನದ ಹಾದಿಯಲ್ಲಿದೆ ಎಂದು ತಿಳಿಸಿದರು.
ಉಡುಪಿ ನೇಕಾರ ಸಂಘದ ಎಮ್ ಡಿ ಸದಾನಂದ ಕಾಂಚನ್ ಅವರು, ಶಿವಳ್ಳಿ ಸಂಘದ ಅಧ್ಯಕ್ಷ ಸಂಜೀವ ಶೆಟ್ಟಿಗಾರ್ ಅವರನ್ನು, ತಾಳಿಪಾಡಿ ನೇಕಾರ ಸಂಘದ ಅಧ್ಯಕ್ಷ ಮಾಧವ ಶೆಟ್ಟಿಗಾರ್ ಅವರು ಸೋಮಪ್ಪ ಜಥನ್ನ ಅವರನ್ನೂ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಿವಳ್ಳಿ ಸಂಘದ ಎಲ್ಲಾ ನೇಕಾರರಿಗೂ ಕದಿಕೆ ಟ್ರಸ್ಟ್ ನಿಂದ ಕೊಡಮಾಡಿದ ಪ್ರೋತ್ಸಾಹ ಧನ ಮತ್ತು ಅಂಗ ವಸ್ತ್ರ ಮತ್ತು ಶಿವಳ್ಳಿ ಸೊಸೈಟಿ ತಮ್ಮ ಸದಸ್ಯರಿಗೆ ಕೊಡಿಸಿದ ಆರೋಗ್ಯ ಕಾರ್ಡ್ ನ್ನು ಅತಿಥಿಗಳು ಸದಸ್ಯರಿಗೆ ವಿತರಿಸಿದರು.
ಶಿವಳ್ಳಿ ನೇಕಾರ ಸಂಘದ ಎಮ್ ಡಿ ಶಶಿಕಾಂತ್ ಕೋಟ್ಯಾನ್ ಸ್ವಾಗತಿಸಿದರು.
ಕದಿಕೆ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ ವಂದಿಸಿದರು.
ಶಿವಳ್ಳಿ ಸಂಘದ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಅನುಭವಿ ನೇಕಾರರು:
ತಮ್ಮ ಹಿರಿ ವಯಸ್ಸಿನ ಹೊರತಾಗಿಯೂ ಇನ್ನೂ ಚಟುವಟಿಕೆಯಿಂದ ನೇಯುತ್ತಿರುವ ಹಿರಿಯ ನೇಕಾರರಾದ ಸೋಮಪ್ಪ ಜತ್ತನ್ನ(86) ಕಳೆದ 63 ವರ್ಷ ಗಳಿಂದ ಮತ್ತು ಸಂಜೀವ ಶೆಟ್ಟಿಗಾರ್ (83) ಕಳೆದ 72 ವರ್ಷಗಳಿಂದ ನಿರಂತರವಾಗಿ ನೇಕಾರಿಕೆ ಮಾಡುತ್ತಿದ್ದಾರೆ.