ಕಾರ್ಕಳ: ಕೊನೆಗೂ ಕಾರ್ಕಳ ಉತ್ಸವಕ್ಕೆ ಅಖಾಡ ಸಿದ್ಧಗೊಂಡಿದೆ. ಶಿಲ್ಪಕಾಶಿ ಎಂದೇ ಜನಮಾನಸದಲ್ಲಿ ಛಾಪು ಹೊತ್ತಿರುವ ಕಾರ್ಕಳದಲ್ಲೀಗ ಎಲ್ಲೆಡೆ ಜಗಮಗ, ಸಂಭ್ರಮ, ಸಡಗರದ ಅಬ್ಬರ. ಮಾ.10 ರಿಂದ ಮಾ.20 ರವರೆಗೆ ನಡೆಯಲಿರುವ ಕಾರ್ಕಳ ಉತ್ಸವಕ್ಕೆ ಮಾ.10 ರಂದು ಭರ್ಜರಿ ಚಾಲನೆ ಸಿಗಲಿದೆ.
ಬೀದಿ ಬೀದಿಗೂ ಬೆಳಕಿನ ಉತ್ಸವ:
ಕಾರ್ಕಳ ನಗರದಲ್ಲೀಗ ಪ್ರತೀ ಬೀದಿ ಬೀದಿಯೂ ಸಿಂಗಾರಗೊಂಡಿದ್ದು ಪ್ರತೀ ಬೀದಿಯನ್ನೂ ಸಂಪೂರ್ಣವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಮೈಸೂರು ಚಾಮುಂಡೇಶ್ವರಿ ವಿದ್ಯುತ್ ನಿಗಮ ಮಂಡಳಿಯ ಇಂಜಿನಿಯರ್ ಗಳು ಈಗಾಗಲೇ ಸಂಪೂರ್ಣ ವಿದ್ಯುತ್ ಅಲಂಕಾರದ ಉಸ್ತುವಾರಿ ವಹಿಸಿಕೊಂಡು ಎಲ್ಲೆಡೆ ಸಕಲ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮೈಸೂರು ದಸರದ ವಿದ್ಯುತ್ ಅಲಂಕಾರವನ್ನು ಗುತ್ತಿಗೆ ಪಡೆಯುವ ಹದಿಮೂರು ಗುತ್ತಿಗೆದಾರರು ನೂರು ಸಿಬ್ಬಂದಿಗಳ ಜೊತೆ ಅಲಂಕಾರ ಕಾಮಗಾರಿಯನ್ನು ಕೈಗೊಂಡಿದ್ದು ಎಲ್ಲವೂ ಅಚ್ಚುಕಟ್ಟಾಗಿದೆ.
ಕಾರ್ಕಳ ಬೈಪಾಸ್ ನಿಂದ ತಾಲೂಕು ಆಫೀಸ್ ವರೆಗೆ ಬಂಗ್ಲೆಗುಡ್ಡೆಯಿಂದ ಕಾರ್ಕಳ ಸ್ವರಾಜ್ ಮೈದಾನ, ಕಾಬೆಟ್ಟು, ಬಂಡಿಮಠ, ದಾನಶಾಲೆ ಭುವನೇಂದ್ರ ಕಾಲೇಜು ರಸ್ತೆ, ಅನಂತಶಯನ ತೆಳ್ಳಾರು ಸೇತುವೆ ವರೆಗೆ ಈಗಾಗಲೇ ವಿದ್ಯುತ್ ದೀಪಾಲಂಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಧಾನ ಸಭಾ ವ್ಯಾಪ್ತಿಯ 20 ಕ್ಕೂ ಹೆಚ್ಚು ವೃತ್ತಗಳಿಗೆ ದೀಪಗಳ ಅಲಂಕಾರ ಮಾಡಲಾಗುತ್ತಿದ್ದು ಗೋಪುರ, ಸ್ತಂಭಗಳಿಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಉತ್ಸವಕ್ಕೆ ಸ್ವಾಗತಿಸುತ್ತಿದೆ ರಸ್ತೆಗಳು:
ಪುರಸಭೆ ವ್ಯಾಪ್ತಿಯ ಅನಂತ ಶಯನದಿಂದ ಬಸ್ಟಾö್ಯಂಡ್ , ಆನೆಕೆರೆ ಮುಖ್ಯರಸ್ತೆ ಡಾಮರೀಕರಣಕ್ಕಾಗಿ ಎಸ್.ಎಫ್.ಸಿ ವಿಶೇಷ ಅನುದಾನದಡಿ 65 ಲಕ್ಷ ರೂ ವೆಚ್ಚದಲ್ಲಿ ಡಾಮರೀಕರಣ ನಡೆಸಲಾಗಿದೆ. ಇತರ ರಸ್ತೆಗಳಿಗೆ ವಾರಾಹಿ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಕಿತ್ತುಹೋದ ರಸ್ತೆಗಳಿಗೆ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಡಾಮರೀಕರಣ ನಡೆಯುತ್ತಿದೆ.
ಮನಸೂರೆಗೊಳ್ಳುತ್ತಿದೆ ಕಲೆಗಳು:
ಇಲ್ಲಿನ ಬಂಗ್ಲೆಗುಡ್ಡೆ ಸರ್ಕಲ್ ಸೇರಿದಂತೆ ನಗರದ ಎಲ್ಲಾ ಸರ್ಕಲ್ ಗಳಿಗೆ ಮುಖ್ಯ ರಸ್ತೆಗಳ ಬದಿಯ ಗೋಡೆಗಳಿಗೆ ಕಾರ್ಕಳ ಉತ್ಸವಕ್ಕೆ ಸ್ವಾಗತ ಕೋರುವ ವರ‍್ಲಿ ಚಿತ್ರಗಳನ್ನು ರಚಿಸಲಾಗಿದ್ದು ಆಕರ್ಷಕವಾಗಿ ಕಾಣುತ್ತಿದೆ. ಬೃಹತ್ ಗಾತ್ರದ 16 ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದ್ದು ಕಾರ್ಕಳ ವಿಧಾನ ಸಭಾ ವ್ಯಾಪ್ತಿಯ 51 ಕಡೆಗಳಲ್ಲಿ ಸಾಮಾನ್ಯ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗಿದೆ.
ಕಾರ್ಕಳ ಉತ್ಸವ ನಡೆಯುವ ಸ್ವರಾಜ್ ಮೈದಾನ, ಗಾಂಧಿಮೈದಾನ, ಭುವನೇಂದ್ರ ಕಾಲೇಜು ಪರಿಸರ, ಕೋಟಿಚೆನ್ನಯ್ಯ ಥೀಂ ಪಾರ್ಕ್ ಆವರಣಗಳಲ್ಲಿ ಪೆಂಡಾಲ್ ಅಳವಡಿಕೆ ಕಾರ‍್ಯ ವೇಗ ಪಡೆಯುತ್ತಿದೆ.
ಹೆಲಿಕಾಪ್ಟರ್ ವಿಹಾರಕ್ಕಾಗಿ ಕಾರ್ಕಳ ತಾಲೂಕು ಮೈದಾನದಲ್ಲಿ ಹೆಲಪ್ಯಾಡ್ ನಿರ್ಮಾಣ ಮಾಡಲಾಗಿದ್ದು ಇನ್ನೇನು ಹೆಲಿಕಾಫ್ಟರ್ ಬರುವುದೊಂದು ಬಾಕಿ ಇದೆ. ಅದಕ್ಕಾಗಿ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದೆ.
ಗಣ್ಯರಿಗಾಗಿ ಕಾಯುತ್ತಿದೆ ಕಾರ್ಕಳ:
ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸೋ ನಿರೀಕ್ಷೆ ಇದೆ.
ಅಂತೂ ಕಾರ್ಕಳಕ್ಕೆ ಕಾರ್ಕಳವೇ ಕಾರ್ಕಳ ಉತ್ಸವ ಅನ್ನೋ ಸಡಗರದ ಹಬ್ಬಕ್ಕೆ ಅಣಿಗೊಂಡು, ಸಿಂಗಾರಗೊಂಡು ನಿಂತಿದೆ.