ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಹೈಸ್ಕೂಲ್ ನಲ್ಲಿ ಹಿಂದಿ ದಿವಸ್ ಆಚರಣೆ

ಕಾರ್ಕಳ: ಮಾತೃ ಭಾಷೆಯ ಜೊತೆಗೆ ಪ್ರಪಂಚದೆಲ್ಲೆಡೆ ಅಧಿಕವಾಗಿ ಬಳಸಲ್ಪಡುವ ಹಿಂದಿ ಭಾಷೆಯನ್ನು ವೃದ್ಧಿಗೊಳಿಸಲು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ಸನ್ಮಾನಿಸುವುದರ ಮೂಲಕ ಹಿಂದಿ ದಿವಸ್ ಆಚರಣೆ ಅರ್ಥಪೂರ್ಣವಾಗುವುದೆಂದು ಸಂತ ಲೋರೆನ್ಸ್ ಪ್ರೌಢಶಾಲಾ ಹಿಂದಿ ಶಿಕ್ಷಕಿ ಜೆನಿಫರ್ ಆಗ್ನೆಸ್ ಡಿಸಿಲ್ವ ಹೇಳಿದರು.

ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಹೈಸ್ಕೂಲ್ ನಲ್ಲಿ ನಡೆದ ಹಿಂದಿ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಎನ್.ಎಚ್. ನಾಗೂರ ಅವರು, 2021ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿಯಲ್ಲಿ ನೂರು ಅಂಕ ಗಳಿಸಿದ ವಿದ್ಯಾರ್ಥಿನಿ ಕಾವ್ಯ ಅವರನ್ನು ಸನ್ಮಾನಿಸಿದರು.
ಶಾಲಾ ಸಂಚಾಲಕರಾದ ರೆವರೆಂಡ್ ಫಾದರ್ ಆಲ್ಬನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೆಸಿಲ್ಲ ಮಿನೇಜಸ್, ಬಿ.ಆರ್.ಪಿ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ದಿಶಾ ಕಾರ್ಯಕ್ರಮ ನಿರೂಪಿಸಿದರು. ಮೆಲಿಶಾ ನೊರೊನ್ಹಾ ವಂದಿಸಿದರು.