ಕಾರ್ಕಳ: ಗ್ಯಾಸ್ ಸಿಲಿಂಡರ್ ಸ್ಪೋಟ; ಲಕ್ಷಾಂತರ ರೂಪಾಯಿ ನಷ್ಟ.

ಕಾರ್ಕಳ: ಸಾಣೂರು ಗ್ರಾಮದ ಮುದ್ದಣ್ಣ ನಗರದ ಮನೆಯೊಂದರಲ್ಲಿ ಗುರುವಾರ (ಜ.16) ಮಧ್ಯರಾತ್ರಿ ಗ್ಯಾಸ್‌ ಸಿಲಿಂಡ‌ರ್ ಸ್ಫೋಟಗೊಂಡ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ.

ಮುದ್ದಣ್ಣ ನಗರದ ನಿವಾಸಿ ವಾರಿಜಾ ಅವರ ಮನೆಯಲ್ಲಿ ರಾತ್ರಿ 1.30ರ ವೇಳೆಗೆ ಈ ದುರ್ಘಟನೆ ನಡೆದಿದೆ. ಅಡುಗೆ ಮನೆಯಲ್ಲಿದ್ದ ಸಿಲಿಂಡ‌ರ್ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದೆ ಎನ್ನಲಾಗಿದ್ದು, ಸ್ಫೋಟದ ಸದ್ದಿಗೆ ಮನೆಯವರು ಹಾಗೂ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಘಟನೆಯ ಸಮಯದಲ್ಲಿ ಮನೆಯವರು ಇನ್ನೊಂದು ಕೋಣೆಯಲ್ಲಿ ಮಲಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಸ್ಫೋಟದ ಭೀಕರತೆಗೆ ಮನೆಯ ಗೋಡೆಗಳು ಕುಸಿದಿವೆ. ಅಲ್ಲದೆ ಮನೆಯಲ್ಲಿದ್ದ ಫ್ರಿಜ್, ಟಿವಿ ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಹಾಗೂ ಪೀಠೋಪಕರಣಗಳು ಸಂಪೂರ್ಣ ಜಖಂಗೊಂಡಿವೆ. ಘಟನೆಯಿಂದ ಅಂದಾಜು ಎರಡು ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ಅಂದಾಜಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.