ಕಾರ್ಕಳ: ನದಿ ತೀರದಲ್ಲಿ ಬಿಸಾಕಿದ್ದ ಹಿಟ್ಟು ತಿಂದು ನಾಲ್ಕು ದನ ಸಾವು; 30ಕ್ಕೂ ಹೆಚ್ಚು ಅಸ್ವಸ್ಥ

ಕಾರ್ಕಳ: ನದಿ ತೀರದಲ್ಲಿ ಎಸೆಯಲ್ಪಟ್ಟಿದ್ದ ಹಿಟ್ಟು ತಿಂದು ನಾಲ್ಕು ಹಸುಗಳು ಮೃತಪಟ್ಟಿದ್ದು, 30ಕ್ಕೂ ಹೆಚ್ಚು ದನಗಳು ಅಸ್ವಸ್ಥಗೊಂಡಿರುವ ಘಟನೆ ಕಾರ್ಕಳ ತಾಲೂಕಿನ ಜೋಗಲ್‌ಬೆಟ್ಟು ನದಿ ತೀರದಲ್ಲಿ ನಡೆದಿದೆ.

ಅವಧಿ ಮೀರಿದ ಹಾಳಾಗಿರುವ ಸುಮಾರು 25 ಗೋಣಿ ಚೀಲ ಹಿಟ್ಟನ್ನು ನದಿ ತೀರದಲ್ಲಿ ಬಿಸಾಡಿದ್ದರು. ಇಲ್ಲಿಯೇ ಮೇಯುತ್ತಿದ್ದ ನಾಲ್ಕು ದನಗಳು ಈ ಹಿಟ್ಟನ್ನು ತಿಂದು ಸಾವನ್ನಪ್ಪಿವೆ. ಮಾ. 9ರಂದು ಒಂದು ದನ ಸ್ಥಳದಲ್ಲೇ ಮೃತಪಟ್ಟರೆ, ಮರುದಿನ ಉಳಿದ ಮೂರು ದನಗಳು ಅಸುನೀಗಿವೆ. ಅಲ್ಲದೆ, ಮೂವತ್ತಕ್ಕೂ ಹೆಚ್ಚು ದನಗಳು ಅಸ್ವಸ್ಥಗೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು, ವಿಷಪೂರಿತ ಹಿಟ್ಟನ್ನು ನದಿ ತೀರಕ್ಕೆ ಬಿಸಾಡಿದವರನ್ನು ಕೂಡಲೇ ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.