ಉಡುಪಿ: ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 10 ತಿಂಗಳ ಹಸುಗೂಸು ಮೃತಪಟ್ಟಿದ್ದು, ಕೊರೊನಾ ಸೋಂಕು ತಗುಲಿರಬಹುದೇ ಎಂಬ ಆತಂಕ ಮೂಡಿದೆ.
ವಿಜಯಪುರ ಜಿಲ್ಲೆಯ ಮೂಲದ ದಂಪತಿಯ ಮಗುವಾಗಿದ್ದು, ಏಪ್ರಿಲ್ ತಿಂಗಳಲ್ಲಿ ಊರಿಗೆ ಹೋಗಿದ್ದ ಇವರು ಕಳೆದ 10 ದಿನಗಳ ಹಿಂದೆಯಷ್ಟೇ ಉಡುಪಿಗೆ ಮರಳಿದ್ದರು. ಜೂನ್ 28ರಂದು ಮಗುವಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಗುವನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಕಾರ್ಕಳದ ತಾಲ್ಲೂಕು ಆಸ್ಪತ್ರೆಗೆ ಕರೆತರುವಾಗ ಮಗು ಸಾವನ್ನಾಪ್ಪಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಗುವಿಗೆ ಜ್ವರ, ಉಸಿರಾಟದ ಸಮಸ್ಯೆ ಇದ್ದ ಕಾರಣ ಕೊರೊನಾ ಪರೀಕ್ಷೆಗಾಗಿ ಗಂಟಲಿನ ದ್ರವದ ಮಾದರಿ ಕಳುಹಿಸಲಾಗಿದ್ದು, ವೈದ್ಯರು ವರದಿಯ ನಿರೀಕ್ಷೆಯಲ್ಲಿದ್ದಾರೆ.