ಕಾರ್ಕಳ: ಕಾರ್ಕಳ ಉತ್ಸವದ ಹಿನ್ನೆಲೆಯಲ್ಲಿ ಗೊಮ್ಮಟ್ಟಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ, ಅತ್ತೂರು ಸಂತಲಾರೆನ್ಸ್ ಬಸಿಲಿಕಾ, ರಾಮಸಮುದ್ರ, ಅನಂತಶಯನ ಶ್ರೀ ಕ್ಷೇತ್ರ ಸೇರಿದಂತೆ ಐತಿಹಾಸಿಕ ಯಾತ್ರಾಸ್ಥಳಗಳು ವಿದ್ಯುತ್ ದೀಪಗಳಿಂದ ಕಂಗೋಳಿಸುತ್ತಿವೆ. ವಿವಿಧ ವಿನ್ಯಾಸ ಹಾಗೂ ಬಣ್ಣ ಬಣ್ಣದ ದೀಪಲಂಕಾರದಿಂದ ಪ್ರೇಕ್ಷಕರ ಮನಸೂರೆಗೊಳಿಸಿದೆ.
ಬಹುತೇಕ ಮಂದಿ ತಮ್ಮಲ್ಲಿರುವ ಮೊಬೈಲ್ ಕ್ಯಾಮರ ಮೂಲಕ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಇನ್ನೂ ಕೆಲವರು ಸೆಲ್ಫಿ ಸ್ಟಾಂಡ್, ಡ್ರೋಣ್ ಅಳವಡಿಸಿ ಚಿತ್ರೀಕರಣ ನಡೆಸುತ್ತಿದ್ದರು.
ಟ್ರಾಫಿಕ್ ಜಾಮ್ ಕಾರ್ಕಳ ಉತ್ಸವದ ದೀಪಾಲಂಕಾರ ಉದ್ಘಾಟನೆಯಾದ ಬಳಿಕ 7:30 ರಿಂದ ತಡರಾತ್ರಿ 12 ಗಂಟೆ ಕಳೆದರೂ ಕಾರ್ಕಳದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂದಿದೆ.
ಬಣ್ಣ ಬಣ್ಣದ ದೀಪಾಲಂಕಾರ:
ನಗರದ 42 ಕಿ.ಮೀ ಉದ್ದದ ರಸ್ತೆ ಪೂರ್ತಿ ವಿವಿಧ ತರದ ಬಣ್ಣ ಬಣ್ಣದ ದೀಪಾಲಂಕಾರದಿಂದ ರಸ್ತೆ ಕಂಗೊಳಿಸುತ್ತಿದ್ದವು.
ದುರ್ಗಾದೇವಿ, ಕೃಷ್ಣಾ, ಗೋಮಟ್ಟೇಶ್ವರ, ಗುರುನಾರಾಯಣ, ಶ್ರೀ ಕೃಷ್ಣ ರಥ,ನೀರಜ್ ಚೋಪ್ರಾ, ಕಂಬಳ, ಕೋಳಿ ಅಂಕ, ಯೋಗ ಸೇರಿದಂತೆ ಹತ್ತು ಪ್ರತಿಕೃತಿಗಳು ಅಕರ್ಷಿಸುತ್ತಿತ್ತು.
ಸ್ವಚ್ಚತೆಗೆ ಹೆಚ್ಚು ಒತ್ತು:
ಕಾರ್ಕಳ ಉತ್ಸವವು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂಬ ಪ್ರತಿಜ್ಞೆಯೊಂದಿಗೆ ಸ್ವಚ್ಚತೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡಲಾಗಿದೆ. ಕಸ ನಿರ್ವಹಣೆಗೆ ಪುರಸಭಾ ವಾಹನಗಳು, ಹಾಗೂ ಹೊರಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಪೌರಕಾರ್ಮಿಕರು ಹಾಗು ಕಾರ್ಕಳದ ಸ್ವಚ್ಛ ಬ್ರಿಗೇಡ್ ತಂಡವು ಜೊತೆಗಿದೆ.
ಸ್ವರಾಜ್ ಮೈದಾನದ ಪರಿಸರದಲ್ಲಿ ವಸ್ತು ಪ್ರದರ್ಶನ, ಸ್ಟಾಲ್ ಬದಿಯಲ್ಲಿ 20 ಮೊಬೈಲ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ನಗರದ ವ್ಯಾಪ್ತಿ ತ್ಯಾಜ್ಯ ಸಂಗ್ರಹಿಸಲೆಂದು ಅಲ್ಲಲ್ಲಿ ಕಸಚೀಲಗಳನ್ನು ಇಡಲಾಗಿದೆ.
ವೈವಿಧ್ಯಮಯ ವಸ್ತು ಪ್ರದರ್ಶನ ಮಳಿಗೆಗಳು: ಮನಸೂರೆಗೊಳ್ಳುವ ವೈವಿಧ್ಯಮಯ ವಸ್ತುಪ್ರದರ್ಶನ ಕ್ಕಾಗಿ ಸ್ವರಾಜ್ ಮೈದಾನದಲ್ಲಿ ಸುಮಾರು 250 ಮಳಿಗೆಗಳು ಸಿದ್ಧಗೊಳ್ಳುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಗೊಂಬೆ, ಬಟ್ಟೆ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಮಡಕೆ, ಮರದ ಕೆಲಸ, ಶಿಲ್ಪಕಲೆ, ಕೃಷಿ, ಬ್ಯಾಗ್ ಮಳಿಗೆಗಳು, ಕಾಶ್ಮೀರ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶಗಳಿಂದ ವಿವಿಧ ಕರ ಕುಶಲ ವಸ್ತುಗಳ ಮಳಿಗೆಗಳು, ಲಲಿತ ಕಲಾ ಅಕಾಡೆಮಿಯ ಲೈವ್ ಆರ್ಟ್, ಲೈವ್ ಕ್ಲೇ ಪ್ರದರ್ಶನ/ಮಾರಾಟ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪ್ರದರ್ಶಿಸಿ ವಿಭಾಗ ಇರಲಿವೆ.
ಜೊತೆಗೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ ಪ್ರದರ್ಶನ ಸ್ಟಾಲ್ ಗಳು, ಅದರಲ್ಲೂ ಅರಣ್ಯ ಇಲಾಖೆಯ ಮಾದರಿ ಅರಣ್ಯ ವಸ್ತು ಪ್ರದರ್ಶನದ ಕಳೆ ಹೆಚ್ಚಿಸಲಿದೆ. ಈ ಮಾದರಿ ಕಾಡಿನಲ್ಲಿ ನರ್ಸರಿ,ರೇಂಜ್ ಆಫೀಸ್, ಶಾಲೆ, ಮನೆ, ಬುಟ್ಟಿ ನೇಯುವ ಹಳ್ಳಿ ಮನೆ, ಗದ್ದೆ, ಕಂಬಳ ಗದ್ದೆ, ವೀಕ್ಷಣಾ ಗೋಪುರ, ನವಗ್ರಹ ವನ, ರಾಶಿ ವನ, ನಾಗಬನ, ಕೆರೆಯ ಮೇಲೆ ತೂಗು ಸೇತುವೆ, ಜಲಪಾತ, ಗುಹೆ, ಹೊಳೆ, ಗಂಗಮೂಲ ಎಲ್ಲವೂ ಈ ಮಾದರಿ ಅರಣ್ಯದಲ್ಲಿ ಇದೆ.