ಕಾರ್ಕಳ: ಕೊರೊನಾ ಕಾಯಿಲೆ ಆರೋಗ್ಯ ಜಾಗೃತಿ ರಥಕ್ಕೆ ಚಾಲನೆ

ಉಡುಪಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ರೋಟರಿ ಕ್ಲಬ್, ಕಾರ್ಕಳ ರಾಕ್ ಸಿಟಿ ಇವರ ಸಂಯುಕ್ತ ಆಶ್ರಯದಲ್ಲಿ, ಶುಕ್ರವಾರ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಕೋವಿಡ್ -19 ಕುರಿತು ಮಾಹಿತಿ ನೀಡುವ ಆರೋಗ್ಯ ಜಾಗೃತಿ ರಥಕ್ಕೆ ಕಾರ್ಕಳ ತಾಲೂಕು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಕಾರ್ಕಳ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ. ಹರ್ಷ ಕೆ.ಬಿ ಜಂಟಿಯಾಗಿ ಚಾಲನೆ ನೀಡಿದರು.

ತಹಶೀಲ್ದಾರ್ ಪುರಂಧರ ಹೆಗ್ಡೆ ಕಾರ್ಯಕ್ರಮದ ಕುರಿತು ಮಾತನಾಡಿ, ಕೊರೊನಾ ಕಾಯಿಲೆ ಕೈ ತಪ್ಪಿ ಹೋಗುವ ಮುನ್ನವೇ ನಾವೆಲ್ಲಾ ಜಾಗೃತರಾಗುವುದು ಅತ್ಯವಶ್ಯಕ, ನಮ್ಮ ಕಛೇರಿಯಲ್ಲಿ ಕೂಡ ಜನಸಂದಣಿ ಕಡಿಮೆ ಮಾಡಲು ಆಧಾರ್ ನೋಂದಾವಣೆಯನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ತೀರಾ ಅವಶ್ಯವಿದ್ದಲ್ಲಿ ಮಾತ್ರ ಕಛೇರಿಗೆ ಬರಬೇಕಾಗಿ ಮನವಿ ಮಾಡಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಹರ್ಷ ಕೆ.ಬಿ ಮಾತನಾಡಿ, ಪ್ರಸ್ತುತ ನಾವು ಸ್ಟೇಜ್ 2 ಕೊರೊನಾ ಸ್ಥಿತಿಯಲ್ಲಿದ್ದು, ಇನ್ನು 15 ದಿನಗಳ ಅವಕಾಶದಲ್ಲಿ ಸ್ಟೇಜ್ 3 ಸಾಂಕ್ರಮಿಕ ರೋಗಕ್ಕೆ ಹೋಗದಂತೆ ಎಚ್ಚೆತ್ತುಕೊಳ್ಳಲು, ಸರ್ಕಾರದ ನಿರ್ದೇಶನದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕಾಗಿ ಮನವಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ಮಾತನಾಡಿ, ವಿದೇಶಗಳಿಂದ ಬಂದು 14 ದಿನಗಳ ಕಾಲ ಕಿuಚಿಡಿಟಿಣiಟಿe ಆದವರು ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು, ಹೊರಗಡೆ ಸುತ್ತಾಡಬಾರದಂತೆ ಹಾಗೂ ಹೆಚ್ಚು ಜನರೊಂದಿಗೆ ಬೆರೆಯದಂತೆ ಮನವಿ ಮಾಡಿದರು.

ಪ್ರಸ್ತುತ ಆರೋಗ್ಯ ಜಾಗೃತಿ ರಥವು ಕಾರ್ಕಳ ತಾಲೂಕಿನಾದ್ಯಂತ ಸಂಚರಿಸಿ ಕೋವಿಡ್-19 ಕೊರೊನಾ ವೈರಸ್ ಬಗ್ಗೆ ಮತ್ತು ಇತರ ಸಾಂಕ್ರಮಿಕ ಕಾಯಿಲೆಗಳ ಬಗ್ಗೆ ಮಾಹಿತಿ ಮತ್ತು ಕರಪತ್ರ ನೀಡುವುದರ ಮುಖಾಂತರ ಜಾಗೃತಿ ಮೂಡಿಸುತ್ತದೆ. ಈ ಆರೋಗ್ಯ ಜಾಗೃತಿ ರಥವು ಮಾ.21 ರಂದು ಹಿರ್ಗಾನ, ಅಜೆಕಾರು, ಹೆಬ್ರಿ, ಮುನಿಯಾಲು ಮತ್ತು ದೊಂಡರಂಗಡಿ, ಮಾ. 23 ರಂದು ನಿಟ್ಟೆ, ಬೆಳ್ಮಣ್, ನಂದಳಿಕೆ, ಸಚ್ಚೇರಿಪೇಟೆ ಮತ್ತು ಇನ್ನ ಹಾಗೂ ಮಾ. 24 ರಂದು ಇರ್ವತ್ತೂರು, ಈದು, ಬಜಗೋಳಿ, ಮಾಳ ಮತ್ತು ದುರ್ಗಾದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

ರೋಟರಿ ಕ್ಲಬ್‍ನ ಅಧ್ಯಕ್ಷ ಜಗದೀಶ್ .ಟಿ, ಮತ್ತು ಸದಸ್ಯರು, ರಾಕ್ ಸಿಟಿ ಇದರ ಅಧ್ಯಕ್ಷ ಸುರೇಂದ್ರ ನಾಯಕ್ ಮತ್ತು ಸದಸ್ಯರು, ತಾಲೂಕಿನ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು, ತಾಲೂಕು ಕಚೇರಿಯ ಸಿಬ್ಬಂದಿಗಳು, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ರ್ಯಾಪಿಡ್ ರೆಸ್ಪಾನ್ಸ್ ಟೀಮ್‍ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ಕಾರ್ಯಕ್ರಮ ನಿರ್ವಹಿಸಿದರು.