ಬಿಎಸ್ಎನ್ಎಲ್ ನ್ನು ಜಿಯೋದೊಂದಿಗೆ ಲೀನಗೊಳಿಸುವ ಹುನ್ನಾರ ಕೇಂದ್ರ ಸರಕಾರದ್ದು :ಕಾರ್ಕಳ ಕಾಂಗ್ರೆಸ್ ಗರಂ

ಕಾರ್ಕಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಬಹುಪ್ರತಿಷ್ಠಿತ ಭಾರತ್ ಸಂಚಾರ ನಿಗಮವನ್ನು ವ್ಯವಸ್ಥಿತ ರೀತಿಯಲ್ಲಿ ಮುಚ್ಚುವ ಅಥವಾ ರಿಲಯನ್ಸ್ ಜಿಯೊದೊಂದಿಗೆ ಲೀನಗೊಳಿಸುವ ವ್ಯವಸ್ಥಿತ ಹುನ್ನಾರ ನಡೆಸುತ್ತಿದ್ದು, ಪರಿಣಾಮವಾಗಿ ಸಾವಿರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.  ಇದೊಂದು ಶತಮಾನದ ಮಹಾ ಮೋಸ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ನಕ್ರೆ ಬಿಪಿನ ಚಂದ್ರಪಾಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್‌ನ್ನು ದುರ್ಬಲಗೊಳಿಸಿ, ಜಿಯೋವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವರೆಗೂ ೪ಜಿ ತರಂಗಾಂತರ ಹಂಚಿಕೆಯಲ್ಲಿ ಬಿಎಸ್‌ಎನ್‌ಎಲ್‌ ನ್ನು ವಂಚಿಸಲಾಗಿತ್ತು. ಆದರೆ ಇತೀಚೆಗೆ ಅಸ್ಥಿತ್ವಕ್ಕೆ ಬಂದ ರಿಲಯನ್ಸ್ ಸಂಸ್ಥೆಗೆ ೪ಜಿ ಸ್ಪೇಕ್ಟ್ರಮ್ ನೀಡಲಾಗಿತ್ತು. ಇದೀಗ ಮತ್ತೆ ಗಾಯದ ಮೇಲೆ ಬರೆ ಎಳೆದಂತೆ, ಬಿಎಸ್‌ಎನ್‌ ಎಲ್ ಟವರ್ ಗಳಲ್ಲಿ ಮಾನವ, ಪ್ರಾಣಿಪಕ್ಷಿ ಸಂಕುಲದ ಆರೋಗ್ಯಕ್ಕೆ ಅತೀಹಾನಿಕಾರಕ ಎನಿಸುವ  ಜಿಯೋ ಆಂಟೇನಾಗಳನ್ನು ಅಳವಡಿಸುವುದರ ಮೂಲಕ ಮೊದಲೇ ದುರ್ಬಲವಾಗಿದ್ದ ಬಿಎಸ್‌ಎನ್‌ಎಲ್ ನ್ನುಸಂಪೂರ್ಣ ದುರ್ಬಲಗೊಳಿಸಿದಂತಾಗಿದೆ.  ದೇಶದ ಮೂಲೆ ಮೂಲೆಗಳಲ್ಲಿ  ತನ್ನದೇ  ಆದ ಟವರ್‌ಗಳನ್ನು ಹೊಂದಿದ್ದ ಬಿಎಸ್‌ಎನ್‌ಎಲ್  ಟವರುಗಳಲ್ಲಿ ಅನ್ಯ ಟೆಲಿಕಮ್ಯೂನಿಕೇಶನ್ ಸಂಸ್ಥೆಗಳ ಆಂಟೇನಾಗಳನ್ನು ಅಳವಡಿಸಲು ನಿರಾಕರಿಸುತ್ತಲೇ ಬಂದಿತ್ತು. ಆದರೆ ಬಿಎಸ್‌ಎನ್‌ಎಲ್ ಇದೀಗ ಜಿಯೋದ ಆಂಟೇನಾಗಳನ್ನು ತನ್ನ ಟವರುಗಳಲ್ಲಿ ಅಳವಡಿಸುವ ಔಚಿತ್ಯವಾದರೂ ಏನು ಎಂದವರು ಪ್ರಶ್ನಿಸಿದ್ದಾರೆ.

ದೇಶದಭದ್ರತೆ ಮತ್ತು ಸಮಗ್ರತೆಯ ನಿಟ್ಟಿನಲ್ಲಿ  ಒಂದು ನಿರ್ದಿಷ್ಟ ಶಕ್ತಿಶಾಲಿ ಸಂವಹನ ಮತ್ತು ಸಮರ್ಥ ನಂಬಲರ್ಹ ವಾಹಕವಾಗಿದ್ದ ಬಿಎಸ್‌ಎನ್‌ಎಲ್‌ನ್ನು ಜಿಯೋದೊಂದಿಗೆ ಟೈಯಪ್ ಮಾಡುವುದರಿಂದ ಟ್ರಾಯ್ ಸಂಸ್ಥೆಯ ಸ್ವಾಯತ್ತತೆಯನ್ನು ಕಸಿದುಕೊಂಡಂತಾಗಿದೆ. ಇದು ಖಂಡನೀಯ ಎಂದವರು ತಿಳಿಸಿದ್ದಾರೆ.