ಕಾರ್ಕಳ: ಇಲ್ಲಿನ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೂಡಬಿದಿರೆಯ ಶ್ರೀ ಧವಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಹಾಗೂ ಇತಿಹಾಸ ತಜ್ಞ ಪುಂಡಿಕಾ ಗಣಪಯ್ಯ ಭಟ್ ಅವರು ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಕನ್ನಡ ನಾಡು ನುಡಿಯ ಚಿಂತನೆಯೇ ಕನ್ನಡ ರಾಜ್ಯೋತ್ಸವ, ಕರ್ನಾಟಕದಲ್ಲಿ
ಇಂಗ್ಲೀಷ್ ಮಾತನಾಡುವ ಕನ್ನಡಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಜಾಗತಿಕ ಅರಿವಿಗೆ ಇಂಗ್ಲೀಷ್ ಬೇಕಿದ್ದರೂ ನಮ್ಮೊಳಗೆ ನಾವು
ಕನ್ನಡ ಬಳಸಿ ಉಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳಲ್ಲಿ
ಶಿಕ್ಷಕರ ಕೊರತೆಯಿಂದಾಗಿ ಪೋಷಕರು ಮಕ್ಕಳನ್ನು
ಆಂಗ್ಲಮಾಧ್ಯಮಕ್ಕೆ ಸೇರಿಸುತ್ತಿದ್ದಾರೆ. ಒಳ್ಳೆಯ ಸೌಲಭ್ಯ,
ವ್ಯವಸ್ಥೆಗಳು ಇದ್ದರೆ ಪೋಷಕರು ಕನ್ನಡ ಮಾಧ್ಯಮಕ್ಕೆ
ತಮ್ಮ ಮಕ್ಕಳನ್ನು ಸೇರಿಸುತ್ತಾರೆ ಎಂಬುದಕ್ಕೆ ಅನೇಕ
ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಕನ್ನಡ ಭಾಷಗೆ
ವಿದೇಶಿಯರ ಕೊಡುಗೆ ಅಪಾರವಾಗಿದೆ” ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪದವಿಪೂರ್ವ ವಿಭಾಗದ
ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್ ಅವರು ಮಾತನಾಡಿ “ನಮ್ಮ
ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಆಡು ಭಾಷೆಯೇ
ಅತ್ಯುತ್ತಮ ಸಾಧನ. ಕನ್ನಡ ಇತರ ಎಲ್ಲಾ ಭಾಷೆಗಳಿಗಿಂತ
ವಿಭಿನ್ನ, ವಿಶಿಷ್ಟ ಶೈಲಿಯದ್ದಾಗಿದೆ. ನೂರಾರು ಭಾಷೆಗಳನ್ನು
ಕಲಿತರೂ ಅನಿವಾರ್ಯ ಸಂದರ್ಭ ಹೊರತುಪಡಿಸಿ ಉಳಿದೆಲ್ಲಾ
ಸಂದರ್ಭಗಳಲ್ಲಿ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು”
ಎಂದು ಹೇಳಿದರು.
ಸಂಸ್ಥೆಯ ಪದವಿಪೂರ್ವ ವಿಭಾಗದ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪದವಿಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಕನ್ನಡಾಭಿಮಾನ ಮೂಡಿಸುವ ಸಮೂಹ ಗಾಯನ
ಕಾರ್ಯಕ್ರಮಗಳು ಜರುಗಿದವು. ಪ್ರಾಥಮಿಕ ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ಶಕೀಲಾ ಸ್ವಾಗತಿಸಿ ಶ್ರೀಮತಿ ಪ್ರಣೀತಾ ಅತಿಥಿಗಳನ್ನು ಪರಿಚಯಿಸಿದರು. ಪ್ರೌಢಶಾಲಾ ಕನ್ನಡ ಶಿಕ್ಷಕಿ ಶ್ರೀಮತಿ ಶೈಲಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


















