ಬೆಳ್ಮಣ್ ಲಾಡ್ಜ್ ನಲ್ಲಿ ಡೆತ್‌ನೋಟು ಬರೆದಿಟ್ಟು ಯುವಕ ಆತ್ಮಹತ್ಯೆ ಪ್ರಕರಣ: ನಾಲ್ವರು ಗೆಳೆಯರ ಮೊಬೈಲ್ ವಶ.

ಕಾರ್ಕಳ: ಗೆಳೆಯರು ಬ್ಲಾಕ್‌ಮೇಲ್ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಡೆತ್‌ನೋಟು ಬರೆದಿಟ್ಟು ನಿಟ್ಟೆಯ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಆ ನಾಲ್ವರು ಗೆಳೆಯರ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಿಟ್ಟೆ ಗ್ರಾಮದ ಪರಪ್ಪಾಡಿಯ ಅಭಿಷೇಕ್ ಆಚಾರ್ಯ(23) ಎಂಬವರು ಯುವತಿ ಸೇರಿದಂತೆ ನಾಲ್ವರು ಗೆಳೆಯರು ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ಡೆತ್‌ನೋಟು ಬರೆದಿಟ್ಟು ಗುರುವಾರ ಬೆಳ್ಮಣ್‌ನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಅಭಿಷೇಕ್ ಪ್ರೇಮ ವೈಫಲ್ಯತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಕುಟುಂಬದವರ ಹೇಳಿಕೆಯ ಪ್ರಕಾರ ಆತ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಅಭಿಷೇಕ್ ಆತ್ಮಹತ್ಯೆಗೆ ಮುನ್ನ ತಾನು ಪ್ರೀತಿಸುತ್ತಿದ್ದ ಲೇಡಿಗೋಶನ್ ಆಸ್ಪತ್ರೆಯ ಸಿಬ್ಬಂದಿಯ ಖಾಸಗಿ ವಿಡಿಯೋ ವನ್ನು ಆಸ್ಪತ್ರೆಯ ಸಿಬ್ಬಂದಿಗಳ ವಾಟ್ಸಾಪ್ ಗುಂಪುಗಳಲ್ಲಿ ಹಂಚಿದ್ದಾನೆ. ಆಕೆ ಇತ್ತೀಚೆಗಷ್ಟೆ ವಿವಾಹವಾಗಿದ್ದಳು. ಇದೇ ಕಾರಣಕ್ಕೆ ಆತ ಈ ರೀತಿ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.ಆತನ ಡೆತ್‌ನೋಟ್‌ನಲ್ಲಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿರುವ ಮೂವರು ಆರೋಪಿಗಳ ಹೆಸರುಗಳನ್ನು ಈಗಾಗಲೇ ಎಫ್‌ಐಆರ್‌ನಲ್ಲಿ ಸೇರಿಸಿ, ಅವರ ಮೊಬೈಲ್ ಫೋನ್‌ಗಳನ್ನು ವಶಪಡಿಸಿ ಕೊಂಡು ತನಿಖೆ ನಡೆಸಲಾಗುತ್ತಿದೆ.

ಡೆತ್‌ನೋಟಿನಲ್ಲಿ ಹೇಳಿರುವಂತೆ ಆ ಯುವತಿ ಆತನ ವಿಡಿಯೋ ಹಂಚಿಕೊಂಡದ್ದು, ಬ್ಲಾಕ್‌ಮೆಲ್‌ನಲ್ಲಿ ಭಾಗಿಯಾಗಿರು ವುದು ಪ್ರಾಥಮಿಕ ತನಿಖೆಯ ಪ್ರಕಾರ ಕಂಡುಬಂದಿಲ್ಲ. ಆದರೂ ಮುಂದಿನ ತನಿಖೆಗಾಗಿ ಆಕೆಯ ಮೊಬೈಲ್‌ನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.