ಕಾರ್ಕಳ ಅತ್ತೂರು ಬಸಿಲಿಕಾ ಮಹೋತ್ಸವಕ್ಕೆ ಅದ್ದೂರಿ ತೆರೆ:  ಸೌಹಾರ್ದತೆ, ಪ್ರೀತಿ, ಸಾಮರಸ್ಯದ ಸಂದೇಶ ಸಾರಿದ ವೈಭವದ ಜಾತ್ರೆ

ಕಾರ್ಕಳ: ಪ್ರಸಿದ್ಧ ಅತ್ತೂರು ಬಸಿಲಿಕಾ ಮಹೋತ್ಸವ ಜನವರಿ 30 ರಂದು ಅದ್ದೂರಿ ತೆರೆಕಂಡಿತು. ಐದು ದಿನಗಳ ಕಾಲ ನಡೆದ ಸಂಭ್ರಮದ ಅತ್ತೂರು ಸಾಂತಮಾರಿ ಲಕ್ಷಾಂತರ ಭಕ್ತರ ತನುಮನವನ್ನು ತಂಪಾಗಿಸಿತು. ಮೊಂಬತ್ತಿ ಹಚ್ಚಿ ತಮ್ಮ ಹರಕೆಗಳನ್ನು ಈಡೇರಿಸುವಂತೆ ಸಂತ ಲಾರೆನ್ಸರಲ್ಲಿ ಪ್ರಾರ್ಥಿಸಿ ಪಾವನರಾದರು. ಈ ಸಲದ ಮಹೋತ್ಸವದ ಸಂದೇಶ “ಭರವಸೆ ನಿಮ್ಮನ್ನು ನಿರಾಶೆ ಮಾಡುವುದಿಲ್ಲ”ಎಂದಾಗಿತ್ತು. ಮಹೋತ್ಸವದ ಅಷ್ಟೂ ದಿನ ಬಲಿಪೂಜೆಗಳ ಮೂಲಕ, ವಿಶೇಷ ಪೂಜೆಗಳ ಮೂಲಕ, ದಿವ್ಯ ಸಂದೇಶಗಳ ಮೂಲಕ ಮಹೋತ್ಸವ ಈ ಘೋಷವಾಕ್ಯವನ್ನು ಸಾರ್ಥಕಗೊಳಿಸಿತು.

ಜ. 30 ರಂದು ಬಲಿಪೂಜೆ, ಅಂತಿಮ ಪೂಜೆ, ಸಂತಲಾರೆನ್ಸರ ಪವಾಡ ಪ್ರತಿಮೆಯ ಮೆರವಣಿಗೆ, ಧ್ವಜ ಅವಹೋರಣ ಕಾರ್ಯಕ್ರಮಗಳು ಭಕ್ತರ ಕಂಗಳನ್ನು ಪುನೀತವಾಗಿಸಿದವು. ಧಾರ್ಮಿಕ, ಸಾಮರಸ್ಯ, ಭಾತೃತ್ವ, ಸೌಹಾರ್ದತೆ, ಸಹಕಾರ ಮತ್ತು ಪ್ರೀತಿಯ ಪ್ರತೀಕವಾಗಿರುವಂತೆ ನಿಂತಿರುವ ಕಾರ್ಕಳದ ಅತ್ತೂರು ಬಸಿಲಿಕಾ ಚರ್ಚ್ ನ ಭವ್ಯ ಸೌಂದರ್ಯವನ್ನು ಜಗತ್ತು ತುಂಬಿಕೊಂಡಿತು.

ಮಹೋತ್ಸವದ ಶೃಂಗಾರ ದಿನವಾದ ಜ. 30 ರಂದು ಎಂಟು ಬಲಿಪೂಜೆಗಳು ನೆರವೇರಿದವು. ಬಾರಾಯ್ ಪುರ್ ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಅ/ವಂ/ ಡಾ. ಸಲ್ವಾದೋರ್ ಲೋಬೊ ಅವರು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿದರು. ಗುರು ಜಿತೇಶ್, ತಮ್ಮ ಧಾರ್ಮಿಕ ಬೋಧನೆಯಲ್ಲಿ, ಭರವಸೆಯ ಜೀವನ, ಕ್ರಿಸ್ತನೊಂದಿಗೆ ಯಾತ್ರಾರ್ಥಿಗಳಾಗುವ ಮಹತ್ವ, ಮತ್ತು ಜುಬಿಲಿ ವರ್ಷದ ಆಶಯಗಳನ್ನು ಪ್ರಬೋಧಿಸಿದರು.

ನೂರಾರು ಗಣ್ಯರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮವನ್ನು ಅಲಂಕರಿಸಿಕೊಂಡರು. ಅಚ್ಚುಕಟ್ಟುತನಕ್ಕೆ ಈ ಸಲದ ಸಾಂತ್ ಮಾರಿ ಮತ್ತೊಮ್ಮೆ ಹೆಸರು ಮಾಡಿತು.