ಕಾರ್ಕಳ ಅತ್ತೂರಿನಲ್ಲಿ ಬಸಿಲಿಕ ಮಹೋತ್ಸವದ ವೈಭವ, ಎಲ್ಲಡೆ ಭಕ್ತಿ ಭಾವ ಸಂಭ್ರಮದ ಕಲರವ

ಕಾರ್ಕಳ:  ಪ್ರಸಿದ್ಧ ಕ್ಷೇತ್ರವಾದ ಅತ್ತೂರಿನ ಸಂತ ಲಾರೆನ್ಸರ ನೆಲೆಬೀಡಾದ ಅತ್ತೂರಿನಲ್ಲಿ ಕಳೆದ ಜನವರಿ 26 ರಿಂದ  ಆರಂಭಗೊಂಡ ಬೆಸಿಲಿಕಾ ಮಹೋತ್ಸವಕ್ಕೆ ನಾಡಿನ ಮೂಲೆ ಮೂಲೆಗಳಿಂದ ಮಾತ್ರವಲ್ಲ, ವಿದೇಶಗಳಲ್ಲಿ ನೆಲೆಸಿರುವ ಭಕ್ತರೂ ಕೂಡ ಮಹೋತ್ಸವದಲ್ಲಿ ಪಾಲ್ಗೊಂಡು ಸಂತ ಲಾರೆನ್ಸರ ದಿವ್ಯ ಆಶೀರ್ವಾದಕ್ಕೆ ಪಾತ್ರರಾದರು.

ಅತ್ತೂರು ಕ್ಷೇತ್ರದಲ್ಲಿ ಪ್ರತಿದಿನವೂ ವಿಶೇಷ ಪೂಜೆ,  ಕೊಂಕಣಿ ಭಾಷೆಯಲ್ಲಿ 31 ಹಾಗೂ ಕನ್ನಡ ಭಾಷೆಯಲ್ಲಿ 7 ಹೀಗೆ ಒಟ್ಟು 38 ದಿವ್ಯಪೂಜೆಗಳು ನಡೆದವು.  ಇಂದು ಜನವರಿ 30  ಬಸಿಲಿಕ ಮಹೋತ್ಸವದ ಕೊನೆಯ ದಿನವಾಗಿದ್ದು, ಹಲವು ವಿಶೇಷ ಪೂಜೆಗಳೊಂದಿಗೆ  ಅತ್ತೂರು ಜಾತ್ರೆ ಸಂಪನ್ನಗೊಳ್ಳಲಿದೆ. ಅಚ್ಚುಕಟ್ಟಾದ ವ್ಯವಸ್ಥೆ, ಲಕ್ಷಾಂತರ ಜನರು ಪಾಲ್ಗೊಂಡರೂ ಯಾವುದೇ ಸಮಸ್ಯೆಯಾಗದ ಹಾಗೆ ನೋಡಿಕೊಳ್ಳುವ ಸ್ವಯಂಸೇವಕರ ನಿರ್ವಹಣೆ, ಪಾರ್ಕಿಂಗ್ ವ್ಯವಸ್ಥೆ, ಭದ್ರತಾ ವ್ಯವಸ್ಥೆ ಗಮನಸೆಳೆಯಿತು.

ಅತ್ತೂರು ವೈಭವ ನೋಡಲು ಜನಜಾತ್ರೆ:

ಕಳೆದ ನಾಲ್ಕು ದಿನಗಳಿಂದಲೂ ಅತ್ತೂರಿಗೆ ಅತ್ತೂರೇ ಸಂಭ್ರಮದಿಂದ ನಳನಳಿಸಿದೆ. ಮೊಂಬತ್ತಿ ಹಚ್ಚಿ ಲಕ್ಷಾಂತರ ಜನ ತಮ್ಮ ಭಕ್ತಿಯನ್ನು ಚರ್ಚ್ ನಲ್ಲಿ ನಿವೇದಿಸಿಕೊಂಡಿದ್ದಾರೆ.  ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಅತಿ ದೊಡ್ಡ ಮೂರ್ತಿಯನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡಿದ್ದಾರೆ.  ಬಸಿಲಿಕದಲ್ಲಿ ಪುಷ್ಕರಣೆಯಲ್ಲೂ ಜನಜಾತ್ರೆ ಕಾಣಿಸುತ್ತಿತ್ತು. ಐನೂರಕ್ಕೂ ಹೆಚ್ಚಿನ ಸ್ಟಾಲ್ ಗಳು ಜನರನ್ನು ಆಕರ್ಷಿಸಿದವು. ಆಹಾರ, ಮಕ್ಕಳ ಆಟಿಕೆ, ಮೊದಲಾದ ಮಳಿಗೆಗಳು ಜನಾಕರ್ಷಣೆಯ ಕೇಂದ್ರವಾಗಿತ್ತು. ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಚರ್ಚ್ ನ ಸೌಂದರ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯಲು ಜನ ಕಾತರಿಸುತ್ತಿದ್ದರು.