ಕಾರ್ಕಳ ಅತ್ತೂರು ಬಸಿಲಿಕಾ ಮಹೋತ್ಸವ-ಹರಿದು ಬಂದ ಜನಸಾಗರ!

ಉಡುಪಿ: ಇತಿಹಾಸ ಪ್ರಸಿದ್ದ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ವಾರ್ಷಿಕ ಮಹೋತ್ಸವ ವೈಭವದಿಂದ ನಡೆಯುತ್ತಿದೆ. ಅತ್ತೂರು ಜಾತ್ರೆಗೆ ಜನಸಾಗರವೇ ಹರಿದು ಬಂದಿದ್ದು, ನಾಲ್ಕನೇ ದಿನವೂ ಭಾರೀ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ರಾತ್ರಿ-ಹಗಲೆನ್ನದೆ ಜನತೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಅತ್ತೂರು ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಜಾತಿ ಮತ ಭೇದಗಳನ್ನು ಮರೆತು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಬರುತ್ತಾರೆ. ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂಬುದು ಈ ವರ್ಷದ ಮಹೋತ್ಸವದ ವಿಷಯವಾಗಿದ್ದು, ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡ ಭಾಷೆಯಲ್ಲಿ 9 ಹೀಗೆ ಒಟ್ಟು 45 ದಿವ್ಯ ಪೂಜೆಗಳನ್ನು ಅರ್ಪಿಸಲಾಗುತ್ತದೆ.

ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಉಡುಪಿ, ಮಂಗಳೂರು, ಕಾರವಾರ, ಅಲಹಾಬಾದ್, ಅಜೀರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸುತ್ತಾರೆ.ದಕ್ಷಿಣ ಭಾರತದಲ್ಲೇ ಭಾವೈಕ್ಯದ ಕ್ಷೇತ್ರವಾಗಿರುವ ಅತ್ತೂರು ಜಾತ್ರೆಗೆ ಸಂತ ಲಾರೆನ್ಸ್ ಬಸಿಲಿಕಾ ಝಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.

ಹಿಂದಿನಿಂದಲೂ ಇದು ಸರ್ವ ಧರ್ಮ ಸಮನ್ವಯದ ಕ್ಷೇತ್ರವಾಗಿದ್ದು ಈ ಸಾಂತ್ ಮಾರಿ ಜಾತ್ರೆಯಲ್ಲಿ ದಕ್ಷಿಣ ಭಾರತದ ಕ್ರೈಸ್ತರು ಮಾತ್ರವಲ್ಲದೆ ಇತರ ಧರ್ಮದವರೂ ಆಗಮಿಸಿ ಹರಕೆ ಸಲ್ಲಿಸುವುದು ಇಲ್ಲಿನ ವಾಡಿಕೆ.ಹಬ್ಬಕ್ಕೆ ಬರುವ ಭಕ್ತಾದಿಗಳು ಇಲ್ಲಿ ಹರಕೆ ರೂಪದಲ್ಲಿ ಮೇಣದ ಬತ್ತಿಗಳನ್ನು ಉರಿಸುತ್ತಾರೆ. ಅಲ್ಲದೆ ಎಣ್ಣೆ ತುಪ್ಪ ಅರ್ಪಿಸಲಾಗುತ್ತದೆ. ಬಸಿಲಿಕಾದ ವೇದಿಕೆಯ ಮೇಲೆ ಎಳೆ ಮಕ್ಕಳನ್ನು ಮಲಗಿಸಿ ಹಿರಿಯರು ಮೊಣಕಾಲೂರಿ ಸೈಂಟ್ ಲಾರೆನ್ಸ್ ಅವರ ದಯೆಗಾಗಿ ಬೇಡುತ್ತಾರೆ. ಪವಾಡ ಮೂರ್ತಿಯ ಎದುರು ಪಾರ್ಥಿಸಿದ್ದೆಲ್ಲಾ ಕೈಗೂಡುತ್ತದೆ ಎಂಬ ನಂಬಿಕೆಯಿಂದ ಕ್ಷೇತ್ರಕ್ಕೆ ಬಂದವರು ಸೈಂಟ್ ಲಾರೆನ್ಸ್ ಅವರ ಪವಾಡ ಮೂರ್ತಿಯ ದರ್ಶನ ಪಡೆಯದೆ ಮರಳುವುದಿಲ್ಲ. ದಕ್ಷಿಣ ಭಾರತದಲ್ಲಿ ಪುಷ್ಕರಿಣಿ ಹೊಂದಿರುವ ಕ್ರೈಸ್ತ ಕ್ಷೇತ್ರವೆಂದರೆ ಅದು ಅತ್ತೂರು ಮಾತ್ರ. ಇಲ್ಲಿಗೆ ಬರುವ ಯಾತ್ರಿಕರು ಇದರ ನೀರನ್ನು ತಲೆ ಮೇಲೆ ಪ್ರೋಕ್ಷಿಸಿಕೊಳ್ಳುತ್ತಾರೆ. ಮನೆಯವರಿಗೆ ಜಾನುವಾರುಗಳಿಗಾಗಿ ಬಾಟಲಿಗಳಲ್ಲಿ ತುಂಬಿಸಿಕೊಂಡು ಕೂಡ ಹೋಗುತ್ತಾರೆ.

ಉಡುಪಿ ಧರ್ಮಪ್ರಾಂತ್ಯದ ಆಡಳಿತಕ್ಕೊಳಪಟ್ಟ ಈ ಕ್ಷೇತ್ರವನ್ನು ಪೋಪ್ ಜಗದ್ಗುರುಗಳು ಕೆಲವು ವರುಷಗಳ ಹಿಂದ ಮೈನರ್ ಬಾಸಿಲಿಕ ಎಂದು ಘೋಷಣೆ ಮಾಡಿದ್ದು ಆ ಬಳಿಕ ವ್ಯಾಟಿಕನ್ ನಿಂದ ವಿಶೇಷ ಮಾನ್ಯತೆಯನ್ನು ಪಡೆದಿದೆ.

2025ನೇ ಸಾಲಿನಲ್ಲಿ ಬಸಿಲಿಕಾ ವತಿಯಿಂದ ಎರಡು ಬಡ ಕುಟುಂಬಗಳಿಗೆ ಮನೆಯನ್ನು ನಿರ್ಮಿಸಿಕೊಡಲಾಗಿದ್ದು, ಬಸಿಲಿಕಾಕ್ಕೆ ವರ್ಷಂಪ್ರತಿ ಸಹಾಯ ಕೇಳಿ ಬರುವ ಬಡವರಿಗೆ ಅವರ ಪರಿಸ್ಥಿತಿಗೆ ಅನುಗುಣವಾಗಿ ಜಾತಿ, ಮತ, ಭೇದವಿಲ್ಲದೆ ಸಹಾಯ ನೀಡಲಾಗುತ್ತದೆ.ಏಕಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಅತೀ ದೊಡ್ಡ ಮೂರ್ತಿಯನ್ನು ಚರ್ಚ್ ನಲ್ಲಿ ಪ್ರತಿಷ್ಠಾಪಿಸಲಾಗಿದ್ದು. ಶಿಲಾ ಕಲ್ಲಿನಿಂದ ಕೆತ್ತಿದ ಸಂತ ಲೋರೆನ್ಸರ ಪ್ರತಿಮೆ ಇಟಲಿ ದೇಶದ ರೋಮ್ ಪ್ರಾಂತ್ಯದಲ್ಲಿ ಬಲಬದಿಯಲ್ಲಿ ಹಾಗೂ ಅತ್ತೂರು ಸಂತ ಲೋರೆನ್ಸ್ ಬಿಸಿಲಿಕಾ ಬಿಟ್ಟರೆ ಬೇರೆಲ್ಲೂ ಕಾಣಸಿಗುವುದಿಲ್ಲ. ಅತ್ತೂರು ಜಾತ್ರೆ ಆರಂಭಗೊಂಡರೆ ರಾತ್ರಿ ಆಗುವುದಿಲ್ಲ ಎಂಬುದು ಪ್ರತೀತಿ. ಆ ದಿನಗಳಲ್ಲಿ ಹಗಲು ರಾತ್ರಿಯೆನ್ನದೆ ಜನಸಾಗರವೇ ಹರಿದು ಬರುತ್ತದೆ.