ಕಾರ್ಕಳ: ಜಿಲ್ಲೆಯಲ್ಲಿ ಕೋಟ್ಪಾ 2003 ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣಾ ತನಿಖಾ ದಳದ ವತಿಯಿಂದ ಕಾರ್ಕಳ ತಾಲೂಕಿನ ಕುಕ್ಕುಂದೂರು ವ್ಯಾಪ್ತಿಯ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೇಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಸೆಕ್ಷನ್ 4, 6 (ಎ) ಮತ್ತು 6(ಬಿ) ಅಡಿಯಲ್ಲಿ 24 ಪ್ರಕರಣ ದಾಖಲಿಸಿ ₹ 4100 ದಂಡ ವಸೂಲಿ ಮಾಡಲಾಯಿತು.
ಎಲ್ಲಾ ಅಂಗಡಿ, ಹೋಟೇಲ್‌ಗಳಲ್ಲಿ ಆಹಾರ ಸುರಕ್ಷತಾ ಪರವಾನಿಗೆಯನ್ನು ಪರೀಕ್ಷಿಸಲಾಯಿತು.
ಮಾನವನ ಆರೋಗ್ಯಕ್ಕೆ ಹಾನಿಯುಂಟು ಮಾಡುವ ತಂಬಾಕು ಉತ್ಪನ್ನಗಳ ವ್ಯಸನದಿಂದ ದೂರವಾಗಿ ಉತ್ತಮ ಆರೋಗ್ಯ ಹೊಂದಬೇಕು ಎಂಬ ಉದ್ದೇಶದಿಂದ ಸರ್ಕಾರ ಇವುಗಳ ನಿಯಂತ್ರಣಕ್ಕೆ ನಿಯಮಗಳನ್ನು ರೂಪಿಸಿದ್ದು, ಸಾರ್ವಜನಿಕರು ಹಾಗೂ ಮಾರಾಟಗಾರರು ತಪ್ಪದೇ ನಿಯಮಗಳನ್ನು ಪಾಲಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಅಪರಾಧವಾಗಿದ್ದು, ತಂಬಾಕು ಉತ್ಪನ್ನಗಳ ಜಾಹಿರಾತುಗಳನ್ನು ನೀಡುವುದು ನಿಷೇಧಿಸಲಾಗಿದ್ದು, ಇವುಗಳ ಉಲ್ಲಂಘನೆಗೆ ದಂಢವಿಧಿಸಲಾಗುವುದು, ವಿದ್ಯಾ ಸಂಸ್ಥೆಯ 100 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ.
ದಾಳಿಯಲ್ಲಿ ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ವಾಸುದೇವ್, ಕಾರ್ಕಳ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ಕಾರ್ಕಳದ ಹಿರಿಯ ಆರೋಗ್ಯ ಸಹಾಯಕ ಶಿವರಾಮ್ ಭಟ್, ಹಿರಿಯ ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್, ಕಾರ್ಕಳ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಸಿದ್ದಪ್ಪ, ರಾಷ್ಟೀಯ ತಂಬಾಕು ನಿಯಂತ್ರಣಾ ಘಟಕದ ವತಿಯಿಂದ ಎನ್.ಟಿ.ಸಿ.ಪಿ ಜಿಲ್ಲಾ ಸಲಹೆಗಾರರಾದ ಮಂಜುಳಾ ಶೆಟ್ಟಿ, ಸಮಾಜಕಾರ್ಯಕರ್ತೆ ಶೈಲಾ ಶಾಮನೂರು, ಕಾರ್ಕಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಧು, ಪೋಲೀಸ್ ಠಾಣೆಯ ಆರಕ್ಷಕರಾದ ದಿನಕರ್ ಎಸ್ ಐ, ಸಂಜಯ್, ದಿನೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.












