ಕಾರ್ಕಳ: ತಿರುವಿನಲ್ಲಿ ರಾಂಗ್ ಸೈಡ್ ನಲ್ಲಿ ಕಾರು ಚಾಲಕ ಅತೀವೇಗವಾಗಿ ಟವೇರಾ ಕಾರನ್ನು ಚಲಾಯಿಸಿಕೊಂಡು ಬಂದು ರಿಕ್ಷಾಗೆ ಡಿಕ್ಕಿಯಾದ ಪರಿಣಾಮ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಕಾರ್ಕಳ ತಾಲೂಕಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸೋಮವಾರ ಸಂಜೆ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟ ರಿಕ್ಷಾ ಚಾಲಕ ಅಂಡಾರು ಗ್ರಾಮದ ಬಾಳ್ಜೆ ನಿವಾಸಿ ಶೇಖರ ಮೂಲ್ಯ(58) ಎಂದು ಗುರುತಿಸಲಾಗಿದೆ.
ಶೇಖರ ಮೂಲ್ಯ ಕಾಡುಹೊಳೆ ಎಂಬಲ್ಲಿಂದ ಪ್ರಯಾಣಿಕರೊಬ್ಬರನ್ನು ಅಜೆಕಾರಿಗೆ ಬಿಟ್ಟು ವಾಪಾಸು ಕಾಡುಹೊಳೆ ರಿಕ್ಷಾ ಸ್ಟ್ಯಾಂಡ್ ಗೆ ಬರುತ್ತಿದ್ದಾಗ ದೊಂಡೇರಂಗಡಿ ಕಡೆಯಿಂದ ಅತೀವೇಗವಾಗಿ ಬಂದ ಟವೇರಾ ವಾಹನ ನೂಜಿಗುರಿಯ ತಿರುವಿನಲ್ಲಿ ರಸ್ತೆಯ ಬಲಬದಿಗೆ ಬಂದು ಶೇಖರ ಮೂಲ್ಯ ಚಲಾಯಿಸುತ್ತಿದ್ದ ರಿಕ್ಷಾಗೆ ರಭಸವಾಗಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಶೇಖರ ಅವರ ತಲೆ ಹಾಗೂ ಕಾಲಿಗೆ ತೀವೃ ಗಾಯಗಳಾಗಿದ್ದು, ರಿಕ್ಷಾ ನುಜ್ಜುಗುಜ್ಜಾಗಿದ್ದು ಶೇಖರ ಮೂಲ್ಯ ಅವರ ದೇಹ ರಿಕ್ಷಾದೊಳಗೆ ಸಿಲುಕಿಕೊಂಡಿದ್ದು ಬಳಿಕ ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಪಘಾತವೆಸಗಿದ ಕಾರು ನಿಯಂತ್ರಣ ಕಳೆದುಕೊಂಡು ಬಲಬದಿಯ ಚರಂಡಿಗೆ ಮಗುಚಿಬಿದ್ದಿದೆ ಅಲ್ಲದೇ ಕಾರಿನ ಹಿಂಬದಿಯ ಚಕ್ರ ಕಿತ್ತುಹೋಗಿದ್ದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು.
ಟವೇರಾ ಚಾಲಕ ದೊಂಡೇರಂಗಡಿಯ ಸನಿತ್ ಶೆಟ್ಟಿ ಎಂಬಾತ ಪಡುಬಿದ್ರೆಯ ಅದಾನಿ ಕಂಪನಿಯಲ್ಲಿ ಕಾರು ಚಾಲಕನಾಗಿದ್ದು ಸೋಮವಾರ ತನ್ನ ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಬಂದಿದ್ದ. ಪೆರ್ಡೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ವಾಪಾಸು ಪಡುಬಿದ್ರಿಗೆ ಟವೇರಾ ಕಾರಿನಲ್ಲಿ ಯುವತಿಯೊಂದಿಗೆ ತೆರಳುತ್ತಿದ್ದಾಗ ತನ್ನ ವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.
ದೊಂಡೇರಂಗಡಿಯಿಂದ ಬರುತ್ತಿದ್ದಾಗ ಅಜೆಕಾರು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಅಲ್ಲಿಂದ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿ ಕಾರನ್ನು ಅತೀ ವೇಗವಾಗಿ ಓಡಿಸಿ ಅಮಾಯಕ ರಿಕ್ಷಾ ಚಾಲಕನ ಬಲಿಪಡೆದ ಕಾರು ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಈತ ಕಂಠಪೂರ್ತಿ ಕುಡಿದು ಚಾಲನೆ ಮಾಡಿದ್ದಾನೆ ಎಂದು ಆರೋಪಿಸಿರುವ ಸ್ಥಳೀಯರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ವಲಯ:
ಅಜೆಕಾರಿನ ನೂಜಿಗುರಿ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬರಹ ವಾಹನಗಳು ಗೋಚರಿಸದೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಈ ಭಾಗದ ರಸ್ತೆಯನ್ನು ಅಗಲೀಕರಣಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.