ಕಾರ್ಕಡ ಗೆಳೆಯರ ಬಳಗ ಕಾರಂತ ಪುರಸ್ಕಾರ

ಕೋಟ: ರವೀಂದ್ರನಾಥ ಠಾಗೂರರ ಅನಂತರ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ ಭಾರತೀಯನಿದ್ದರೆ ಅದು ಶಿವರಾಮ ಕಾರಂತರು ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಭಿಪ್ರಾಯಪಟ್ಟರು.

ಅವರು ಸಾಲಿಗ್ರಾಮ-ಕಾರ್ಕಡ ಗೆಳೆಯರ ಬಳಗದ ಆಶ್ರಯದಲ್ಲಿ ಅ.೧೩ರಂದು ಕಾರ್ಕಡ ಹಿ.ಪ್ರಾ.ಶಾಲೆಯಲ್ಲಿ ನಡೆದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಕಾರಂತ ಸಂಸ್ಮರಣೆ ಮತ್ತು ಗೆಳೆಯರ ಕಾರಂತ ಪುರಸ್ಕಾರ ಸಮಾರಂಭದಲ್ಲಿ ಗೆಳೆಯರ ಬಳಗ ಕಾರಂತ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಕರ್ಣಾಟಕ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಅಂಬಾತನಯ ಮುದ್ರಾಡಿಯವರಿಗೆ ಗೆಳೆಯರ ಬಳಗದ ಕಾರಂತ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರಿನ ಕಲ್ಕೂರ ಪ್ರತಿಷ್ಟಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕ.ಸಾ.ಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರಂತರ ಸಂಸ್ಮರಣೆಗೈದರು.

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ, ಮಂಗಳೂರಿನ ಕಲಾಸಾಹಿತಿ ಎಚ್.ಜನಾರ್ಧನ ಹಂದೆ, ಮುಖ್ಯ ಶಿಕ್ಷಕ ಎನ್.ಪ್ರಭಾಕರ ಕಾಮತ್, ಸಾಲಿಗ್ರಾಮ ಪ.ಪಂ. ಸದಸ್ಯ ಗಣೇಶ್, ಸಂಜೀವ ದೇವಾಡಿಗ, ಜನಜಾಗೃತಿ ವೇದಿಕೆಯ ಅಧ್ಯಕ್ಷ ಕೆ.ಅಚ್ಯುತ ಪೂಜಾರಿ ಉಪಸ್ಥಿತರಿದ್ದರು.

ಬಳಗದ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಸ್ವಾಗತಿಸಿ, ವಿದ್ವಾನ್ ದಾಮೋದರ ಶರ್ಮ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕೆ.ಚಂದ್ರಕಾಂತ ನಾರಿ ವಂದಿಸಿದರು.