ಉಡುಪಿ: ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ಕಾರ್ಗಿಲ್ ವಿಜಯ ದಿನಾಚರಣೆ

ಉಡುಪಿ: ನೈಜ ಭಾರತೀಯನಿಗೆ ಈ ದಿನ ಮರೆಯಲು ಸಾಧ್ಯವಿಲ್ಲ. ದೇಶದ ಭದ್ರತೆ, ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವಲ್ಲಿ ನಮ್ಮ ಯೋಧರು ತೋರಿದ ತ್ಯಾಗ ಬಲಿದಾನವನ್ನು ರಾಷ್ಟ್ರದ ಜನತೆ ಎಂದಿಗೂ ಮರೆಯಲಾಗದು. 1999 ರಲ್ಲಿ ನಡೆದ ಯುದ್ಧವೇ ಕಾರ್ಗಿಲ್ ಯುದ್ಧ. ಕಾರ್ಗಿಲ್ ಯುದ್ಧದ ವಿಜಯ ದಿವಸವನ್ನು ಜುಲೈ 26 ರಂದು ಆಚರಿಸಲಾಗುತ್ತದೆ ಎಂದು ಬಿಎಸ್ಎಫ್ ನಿವೃತ್ತ ಸೇನಾಧಿಕಾರಿ ಕೆ ಸುರೇಶ್ ರಾವ್ ಹೇಳಿದರು.

ಅವರು ಕಾಡುಬೆಟ್ಟಿನಲ್ಲಿರುವ ಟಿ ಎ ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ವತಿಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಸ್ವೀಕರಿಸಿ ಮಾತನಾಡಿದರು.

ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಎಚ್ಆರ್ ಶೆಣೈ ಸಭೆಯನ್ನು ಉದ್ದೇಶಿಸಿ ಮಾತನಾಡಿ ಲಯನ್ಸ್ ಕ್ಲಬ್ಬಿನ ಸೇವೆಯನ್ನು ಸ್ಮರಿಸಿದರು.

ಪ್ರತಿಭಾವಂತ ವಿದ್ಯಾರ್ಥಿನಿ ಅಂಕಿತಾ ಇವರಿಗೆ ಕ್ಲಬ್ಬಿನ ಪರವಾಗಿ ಧನ ಸಹಾಯ ಮಾಡಲಾಯಿತು. ಶಾಲಾ ಮಕ್ಕಳಿಗೆ ಕೊಡೆಗಳನ್ನು ವಿತರಿಸಲಾಯಿತು.

ಪ್ರಾಂತ್ಯ ಅಧ್ಯಕ್ಷ ಲಯನ್ ಹರಿಪ್ರಸಾದ್ ರೈ, ಜಿಲ್ಲಾ ಡೈರೆಕ್ಟರ್ ಯಾ ಪ್ರಮುಖ ಸಂಪಾದಕ ಲಯನ್ಸ್ ಸಪ್ನಾ ಸುರೇಶ್, ಜಿಲ್ಲಾ ಕಾರ್ಡಿನೇಟರ್ ಲಯನ್ ವಾದಿರಾಜರಾವ್, ಬ್ರಹ್ಮಗಿರಿ ಶಾಖೆಯ ಅಧ್ಯಕ್ಷ ಲಯನ್ ಉಮೇಶ್ ನಾಯಕ್ ಹಾಗೂ ಕ್ಲಬ್ಬಿನ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಿತಿಯ ರಮೇಶ್ ರಾವ್ ಸ್ವಾಗತಿಸಿದರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ ವಂದಿಸಿದರು. ಶಿಕ್ಷಕಿ ಸೌದಾಮಿಯವರು ಕಾರ್ಯಕ್ರಮ ನಿರೂಪಿಸಿದರು.

ಕೊನೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.