ಉಡುಪಿ: ರಾಜ್ಯದಲ್ಲಿ ದ್ವಿಭಾಷಾ ಶಿಕ್ಷಣ ನೀತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಹಾಗೂ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದ ಪಠ್ಯಕ್ರಮದಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ದ್ವಿತೀಯ ಭಾಷೆಯಾಗಿ ಇಂಗ್ಲಿಷ್ ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ. ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಅನಗತ್ಯವಾದ ಒತ್ತಡ ಒಡ್ಡುತ್ತಿದೆ. ಇಂಗ್ಲಿಷ್ ಭಾಷೆಯು ಜಾಗತಿಕ ವ್ಯವಹಾರಗಳಿಗೆ, ಉನ್ನತ ಶಿಕ್ಷಣ ಮತ್ತು ವೃತ್ತಿ ನಿರ್ವಹಣೆಗೆ ಅಗತ್ಯವಾಗಿದೆ. ಇದನ್ನು ಕಲಿಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಹಿಂದಿಯನ್ನು ಕಡ್ಡಾಯವಾಗಿ ಓದಿಸುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಯಾವುದೇ ಗಮನಾರ್ಹ ಲಾಭವಿಲ್ಲ. ಹೀಗಾಗಿ ರಾಜ್ಯ ಸರಕಾರ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಿಗೆ ಆದ್ಯತೆ ನೀಡುವ ದ್ವಿಭಾಷಾ ನೀತಿಯನ್ನು ಜಾರಿಗೆ ತರಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಅರಾ ಪ್ರಭಾಕರ ಪೂಜಾರಿ, ರಾಜ್ಯದಲ್ಲಿ ಅನಗತ್ಯ ಹಿಂದಿ ಹೇರಿಕೆ ಸಲ್ಲದು. ತೃತೀಯ ಭಾಷೆಯಾದ ಹಿಂದಿಯನ್ನು ಪಠ್ಯಕ್ರಮದಿಂದ ಹೊರಗಿಡಬೇಕು. ರಾಜ್ಯ ಮತ್ತು ಕೇಂದ್ರೀಯ ಶಿಕ್ಷಣ ವ್ಯವಸ್ಥೆಗಳಾದ CBSE, ICSE ಶಾಲೆಗಳಿಗೆ ಏಕರೂಪದ ದ್ವಿಭಾಷಾ ನೀತಿಯನ್ನು ಜಾರಿಗೊಳಿಸಬೇಕು. ಸಿಬಿಎಸ್‌ಇ, ಐಸಿಎಸ್ ಇ ಶಾಲೆಗಳಲ್ಲೂ ಪ್ರಥಮ ಭಾಷೆಯಾಗಿ ಕನ್ನಡವನ್ನೇ ಕಡ್ಡಾಯಗೊಳಿಸಬೇಕು. ಕನ್ನಡ ಮಾಧ್ಯಮ ಶಾಲೆಗಳನ್ನು ಬಲಪಡಿಸಿ, ಉತ್ತಮ ಗುಣಮಟ್ಟದ ಇಂಗ್ಲಿಷ್ ಶಿಕ್ಷಣವನ್ನು ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್ ವಿ, ಗೌರವಾಧ್ಯಕ್ಷ ಜಯ ಸಾಲಿಯಾನ್, ಜಿಲ್ಲಾ ಗೌರವಾಧ್ಯಕ್ಷ ಗೋಪಾಲ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಅನಿಲ್ ಪೂಜಾರಿ, ಪ್ರಧಾನ ಸಂಚಾಲಕ ಕಿರಣ್ ಪಿಂಟೊ ಮೊದಲಾದವರು ಇದ್ದರು.












