ಉಡುಪಿ/ಮಂಗಳೂರು: ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಜೆಸಿಐ ಉಡುಪಿ ಸಿಟಿ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಇದರ ೨೦ನೇ ವರ್ಷಾಚರಣೆ ಹಾಗೂ ಯೋಧ ನಮನ ಕಾರ್ಯಕ್ರಮವು ಜು. ೨೬ ರಂದು ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆಯಿತು. ಸೈನ್ಯದಲ್ಲಿ ಸುದೀರ್ಘ ೨೪ ವರ್ಷಗಳ ಕಾಲ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಸತತವಾಗಿ ೨೧ ದಿನಗಳ ಕಾಲ ಗಡಿಯಲ್ಲಿ ಬಂಕರ್ ನಲ್ಲಿಯೇ ಆಶ್ರಯಪಡೆದುಕೊಂಡು ಅಲ್ಲಿಂದಲೇ ಕೆಚ್ಚೆದೆಯ ಹೋರಾಟವನ್ನು ಪ್ರದರ್ಶಿಸಿದ ನಿವೃತ್ತ ಯೋಧ ಜಗದೀಶ್ ಪ್ರಭು ಹಿರಿಯಡ್ಕ ಅವರನ್ನು ಸನ್ಮಾನಿಸಲಾಯಿತು.
ಅನಂತರ ಮಾತನಾಡಿದ ಜಗದೀಶ್ ಪ್ರಭು, ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ ಘಟನಾವಳಿಗಳು ಇನ್ನೂ ಕೂಡ ಕಣ್ಣ ಮುಂದೆ ಹಾದು ಹೋಗುತ್ತದೆ. ಅಂದು ನಮ್ಮವರು ನಡೆಸಿದ ಅಪ್ರತಿಮ ಹೋರಾಟದ ಫಲವಾಗಿ ಪ್ರತಿಯೊಬ್ಬರೂ ನಿಟ್ಟುಸಿರು ಬಿಡುವಂತಾಗಿದೆ. ಕಾರ್ಗಿಲ್ ಯುದ್ಧದ ಸಮಯದಲ್ಲಿ ಗಡಿಯಲ್ಲಿ ನಮ್ಮ ಸುತ್ತಲೂ ಶತ್ರು ರಾಷ್ಟ್ರದ ವಿಪರೀತ ಶೆಲ್ ದಾಳಿಗೆ ಅನೇಕ ಸವಾಲುಗಳ ನಡುವೆಯೂ ನಾವು ತಕ್ಕ ಪ್ರತ್ಯುತ್ತರ ನೀಡಿದೆವು. ಸತತವಾಗಿ ೨೧ ದಿನಗಳ ಕಾಲ ಸರಿಯಾಗಿ ಆಹಾರವನ್ನು ಸೇವಿಸದೆಯೇ ದೇಶದ ಹಿತಾಸಕ್ತಿಯಿಂದ ಹೋರಾಡಿದ ಅನುಭವವು ವಿಶೇಷವಾಗಿದೆ ಎಂದರು.
ಮಾಜಿ ಸೈನಿಕ ಗಿಲ್ಬರ್ಟ್ ಬ್ರಗಂಜಾ ಮಾತನಾಡಿ, ಯೋಧರನ್ನು ಟೀಕೆ ಮಾಡುವವರು ಒಂದು ದಿನ ಗಡಿಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಲಿ. ಪ್ರತಿಕೂಲ ವಾತಾವರಣಗಳಲ್ಲಿಯೂ ಅಚಲವಾದ ದೇಶಭಕ್ತಿಯೊಂದಿಗೆ ಸೇವೆಸಲ್ಲಿಸುವ ಯೋಧರು ನಮಗೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು. ಉಪನ್ಯಾಸಕ ಗಣೇಶ್ ಪ್ರಸಾದ್ ಮಾತನಾಡಿದರು.
ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ಕರ್ನಲ್ ರಾಡ್ರಿಗಸ್, ನೌಕಾದಳದ ನಿವೃತ್ತ ಯೋಧ ಗಣೇಶ್ ರಾವ್, ನಿವೃತ್ತ ನಾಯ್ಕ್ ಸುಬೇದಾರ್ ಗಣಪಯ್ಯಾ ಶೇರಿಗಾರ್, ಮಾಜಿ ಸೈನಿಕರ ಸಹಕಾರಿ ಸಂಘದ ಕಾರ್ಯದರ್ಶಿ ಪರಮಶಿವ ಕೆ, ರಘುಪತಿ ರಾವ್, ದೊರಥಿ, ತುಳಸಿ ದೇವಾಡಿಗ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು, ಉದಯ ನಾಯ್ಕ್, ಕಿರಣ್ ಭಟ್, ಬಂಧನ್ ಬ್ಯಾಂಕಿನ ಗುರುದತ್ತ, ಅಭಿಷೇಕ್, ಚಿತ್ತರಂಜನ್, ರವಿರಾಜ್, ಪ್ರೇಮಪ್ರಸಾದ್ ಶೆಟ್ಟಿ ಮಾಜಿ ಸೈನಿಕ ವಾದಿರಾಜ್ ಹೆಗ್ಡೆ ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯ ಹಲವೆಡೆ ಕಾರ್ಗಿಲ್ ವಿಜಯ ದಿವಸ
ಮಂಗಳೂರು: 20ನೇ ವರ್ಷದ ಕಾರ್ಗಿಲ್ ವಿಜಯ ದಿವಸದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಸಂಭ್ರಮದಿಂದ ಕಾರ್ಗಿಲ್ ಡೇಯನ್ನು ಆಚರಿಸಲಾಯಿತು.
ಮಂಗಳೂರಿನ ಕದ್ರಿ ಪಾರ್ಕ್ ಬಳಿ ಇರುವಂತಹ ಹುತಾತ್ಮ ಯೋಧರ ಸ್ಮಾರಕಕ್ಕೆ ಎಸ್.ಪಿ.ವೈ.ಎಸ್. ಎಸ್ ಕರ್ನಾಟಕ ನೇತ್ರಾವತಿ ವಲಯ ಮಂಗಳೂರು ಇದರ ಆಶ್ರಯದಲ್ಲಿ ಯೋಧರ ಸ್ಮಾರಕಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಗೌರವವನ್ನು ಅರ್ಪಿಸಲಾಯಿತು.












